ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅವರ ಸ್ವಗ್ರಾಮವಾಗಿರುವ ಖಾಶೆಂಪುರ್ ಪಿ ಗ್ರಾಮದಲ್ಲಿರುವ ದತ್ತ ಮಹಾರಾಜರ ಅವತಾರ ಪುರುಷ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 9ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ವಿಶೇಷ ಪೂಜೆ, ಮಹಾ ಪಲ್ಲಕ್ಕಿ ಉತ್ಸವ, ರಥೋತ್ಸವ ಕಾರ್ಯಕ್ರಮಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ನಡೆದ ಪುರವಂತಿಕೆ ಸೇವೆ (ಪುರವಂತಿಕೆ ಮೇಳ), ಮೊಸರು ಗಡಗಿ (ಮೊಸರಿನ ಮಡಿಕೆ) ಒಡೆಯುವ ಸ್ಪರ್ಧೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಅನ್ನ ದಾಸೋಹ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ಅವರು, ಸಂಜೆಯ ವೇಳೆಗೆ ನಡೆದ ರಂಗೋಲಿ ಸ್ಪರ್ಧೆ ವೀಕ್ಷಿಸಿ, ಬಳಿಕ ನಡೆದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಆಶೀರ್ವಾದ ಪಡೆದರು.
ರಥೋತ್ಸವದ ವೇಳೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು. ಸದ್ಗುರು ಶ್ರೀ ಸಚ್ಚಿದಾನಂದ ಸ್ವಾಮೀಜಿ ಸನ್ನಿಧಿಯಲ್ಲಿ ರಥೋತ್ಸವದುದ್ದಕ್ಕೂ ಸಾಗಿದ ವಿವಿಧ ವಾದ್ಯ ಮೇಳಗಳು, ಕಲಾ ತಂಡಗಳು ಕಾರ್ಯಕ್ರಮದ ಮೆರಗು ಹೆಚ್ಚಿಸಿದವು. ಇದೇ ವೇಳೆ ಭಕ್ತರು ಪಟಾಕಿ (ಮದ್ದು ಗುಂಡು ಸುಡುವುದು) ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಇಟಗಾ ಮಠದ ಶರಣಯ್ಯ ಸ್ವಾಮಿ, ದೇವಸ್ಥಾನದ ಅರ್ಚಕರಾದ ಶಿವಾನಂದ ಸ್ವಾಮಿ, ರಾಜು ಖಾಶೆಂಪುರ್, ಬಾಬುರಾವ್ ಖಾಶೆಂಪುರ್, ರಾಜಕುಮಾರ ಪಾಟೀಲ್, ಮಾರುತಿ ವಗ್ಗೆ, ಶಂಕರರಾವ್ ಸಿಂಧೆ, ಶೇಕಪ್ಪ ಪಾಟೀಲ್, ನರಸಣ್ಣ ಬಸಗೊಂಡ, ವಿಶ್ವನಾಥ ಬಾಲೇಬಾಯಿ, ಮಂಜುನಾಥ ಬಾಲೇಬಾಯಿ, ಸುನೀಲ್ ಗುಮಾಸ್ತಿ, ಶಿವಕುಮಾರ್ ಬಾಲೇಬಾಯಿ, ಅಮರೇಶ ಗುಮಾಸ್ತಿ, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಕೃಷ್ಣಚಾರಿ, ಲಕ್ಷ್ಮಣ ಹೊಸಳ್ಳಿ, ಸುನೀಲ್ ಸತನೋರ್, ಮಾರುತಿ ಬಸಗೊಂಡ ಸೇರಿದಂತೆ ಬಂಡೆಪ್ಪ ಖಾಶೆಂಪುರ್ ರವರ ಕುಟುಂಬಸ್ಥರು, ಖಾಶೆಂಪುರ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.



