ಕಲಬುರಗಿ: ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಕಟ್ಟಡಕ್ಕೆ ಸೆಟ್ ಬ್ಯಾಕ್ ಇಲ್ಲ ಅನ್ನೋ ಕಾರಣಕ್ಕೆ ಪಾಲಿಕೆಯಿಂದ ನೋಟಿಸ್ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ವಿರುದ್ದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ಅಕ್ರಮ ಕಟ್ಟಡಗಳ ತೆರವಿಗೆ ಬುಲ್ಡೋಜರ್ ಬಾಬಾ ಆಗ್ತೀನಿ ಅಂದಿದ್ರಲ್ಲಾ ಪ್ರಿಯಾಂಕ ಖರ್ಗೆ ಅವರೇ, ಬಿಳಿ ಬಟ್ಟೆ ಹಾಕಿದ್ರೆ ನಿಮಗೆ ಧೈರ್ಯ ಬರಲ್ಲ. ಕೇಸರಿ ಬಟ್ಟೆ ಹಾಕಿದ್ರೆ ಧೈರ್ಯ ಬರುತ್ತೇ, ಕೇಸರಿ ಬಟ್ಟೆ ನಾವೇ ಕೊಡುತ್ತೇವೆ ಎಂದು ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಸರಿ ಬಟ್ಟೆ ಪ್ರದರ್ಶನ ಮಾಡಿ, ಕೇಸರಿ ಬಟ್ಟೆಯನ್ನ ನಾವು ಇವತ್ತೇ ಪ್ರಿಯಾಂಕ ಖರ್ಗೆ ಅವರಿಗೆ ಕೋರಿಯರ್ ಮೂಲಕ ಕಳಿಸುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ಬೇರೆಯವರ ಧಮ್, ತಾಕತ್ ಬಗ್ಗೆ ಪ್ರಶ್ನೆ ಮಾಡುವ ನೀವು ನಿಜವಾದ ಸಂವಿಧಾನದ ಭಕ್ತ, ಡೋಂಗಿ ಭಕ್ತನಲ್ಲ ಎಂದು ಪ್ರೂವ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ತಮ್ಮದೂ ಸೇರಿದಂತೆ ಅನೇಕ ಅಕ್ರಮ ಕಟ್ಟಡಗಳಿವೆ. ಇದೀಗ ಕೋರ್ಟ್ ಸಹ ಅಕ್ರಮ ಕಟ್ಟಡ ತೆರುವಿಗೆ ಆದೇಶ ಹೊರಡಿಸಿದೆ. ನೀವು ನಿಜವಾಗಿಯೂ ಸಂವಿಧಾನದ ಭಕ್ತರಾಗಿದ್ರೆ, ಕಟ್ಟಡಗಳನ್ನು ತೆರುವುಗೊಳಿಸಿ. ನಮ್ಮ ಕಟ್ಟಡ ನೆಲಸಮ ಮಾಡಲು ನೀವು ತೋರಿದ ಮುತುವರ್ಜಿಯನ್ನು ಈಗ ತೋರಿಸಿ ಎಂದು ಸಿದ್ದಲಿಂಗ ಸ್ವಾಮಿ ಸವಾಲು ಹಾಕಿದ್ದಾರೆ.