ವಿಜಯಸಾಕ್ಷಿ ಸುದ್ದಿ, ಗದಗ : ಪ್ರಗತಿಪರರ ಆಶಯಗಳ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಅವರನ್ನೇ ಅವಮಾನಿಸುವ ಕೃತ್ಯಕ್ಕೆ ಇಳಿದಿರುವುದು ದುರಂತ. ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತವೆ. ಅಂಥ ಸಂಸ್ಥೆಗಳ ಮುಖ್ಯಸ್ಥರನ್ನು ಪಕ್ಷದ ಕಚೇರಿಗೆ ಕರೆಸಿ ಮಾತಾಡಿದ್ದು ಸರಿಯಲ್ಲ. ಸಭೆಯಲ್ಲೂ ಪಕ್ಷದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು ಎಂದಿರುವುದು ಸಂವಿಧಾನ ಆಶಯಗಳಿಗೆ ವಿರುದ್ಧವಾದದ್ದು ಎಂದು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆರೋಪಿಸಿದರು.
ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ, ಸಾಂಸ್ಕೃತಿಕ ಮತ್ತು ಪ್ರಾಧಿಕಾರದ ಮುಖ್ಯಸ್ಥರನ್ನು ಪಕ್ಷದ ಕಚೇರಿಗೆ ಕರೆದು ಸಭೆ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದಾದರೆ, ಸಚಿವ ಸಂಪುಟದ ಸಭೆಯನ್ನೂ ಪಕ್ಷದ ಕಚೇರಿಯಲ್ಲಿ ಮಾಡಲಿ ಎಂದು ಸವಾಲು ಹಾಕಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾಹಿತಿಗಳ ಸಭೆಯನ್ನು ಪಕ್ಷದ ಕಚೇರಿಯಲ್ಲಿ ಕರೆದಿರುವುದನ್ನು ಸಮರ್ಥಿಸಿಕೊಂಡಿದ್ದಲ್ಲದೇ, ಸಾಹಿತಿಗಳು ರಾಜಕಾರಣಿಗಳು ಎಂದಿರುವುದು ಸಾಂಸ್ಕೃತಿಕ ವಲಯಕ್ಕೆ ಮಾಡಿದ ಅವಹೇಳನವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು, ಇದು ಪಕ್ಷ ಸರಕಾರ, ಪಕ್ಷದ ಕಚೇರಿಗೆ ಸಾಹಿತಿಗಳ ಸಭೆ ಕರೆಯುವುದು ತಪ್ಪಲ್ಲ ಎಂದಿರುವುದು ಕಾಂಗ್ರೆಸ್ ಅಧಃಪತನಕ್ಕೆ ಇಳಿದಿರುವುದನ್ನು ಕಾಣಬಹುದು ಎಂದರು.
ಕಾಂಗ್ರೆಸ್ ಸಾಂಸ್ಕೃತಿಕ ವಲಯದ ಮೇಲೆ ರಾಜಕೀಯ ಹಿಡಿತ ಸಾಧಿಸಲು ಹೊರಟಿದೆ. ಇಷ್ಟೆಲ್ಲ ವಿವಾದಗಳಾದ ನಂತರವೂ ಅರ್ಥ ಮಾಡಿಕೊಂಡು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಿಳಿಹೇಳುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಗಳೂ ಮಾಡಿಲ್ಲ. ಇದೆಲ್ಲವನ್ನೂ ನೋಡಿದರೆ ಕಾಂಗ್ರೆಸ್ ಸಹ ನಿಧಾನವಾಗಿ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಂಕರಗೌಡ ಸಾತ್ಮಾರ, ಡಿ.ಎಂ. ಬಡಿಗೇರ, ಮುತ್ತು ಬಿಳೆಯಲಿ ಮುಂತಾದವರು ಉಪಸ್ಥಿತರಿದ್ದರು.