ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಮಹಿಳೆ ಶೋಭ ಅವರನ್ನು ಬಲಿ ಪಡೆದಿದ್ದ ಪುಂಡ ಕಾಡಾನೆ ಕೊನೆಗೂ ಸೆರೆ ಸಿಕ್ಕಿದೆ. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಉಗ್ರ ಕಾರ್ಯಾಚರಣೆಯಲ್ಲಿ ಕಾಡಾನೆಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೂ ನಿತ್ರಾಣಗೊಳ್ಳದ ಕಾಡಾನೆ ಸುಮಾರು 12 ಕಿಲೋ ಮೀಟರ್ ದೂರ ಸುತ್ತಾಡಿ ಕೊನೆಗೆ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದ ಕಾಫಿ ತೋಟದಲ್ಲಿ ಕುಸಿದು ಬಿದ್ದಿದೆ.
ಕಾಡಾನೆಯನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪುಂಡಾನೆ ಸೆರೆ ಸಿಕ್ಕ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಜನರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಎರಡು ವಾರಗಳ ಹಿಂದೆ ಕೊಡಗು ಭಾಗದಿಂದ ಹಾಸನ ಜಿಲ್ಲೆಗೆ ಪ್ರವೇಶಿಸಿದ್ದ ಈ ಕಾಡಾನೆ ಶೋಭ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಬಳಿಕ ಜನರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 14ರಂದು ಅರಣ್ಯ ಸಚಿವರಿಂದ ಸೆರೆ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು.
ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರಗಳಿಂದ ಧನಂಜಯ, ಸುಗ್ರೀವ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಎಂಬ ಐದು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿತ್ತು. ಜ.16ರಂದು ಬೆಳಗ್ಗೆಯೇ ಇಟಿಎಫ್ ಸಿಬ್ಬಂದಿ ಪುಂಡಾನೆಯನ್ನು ಹುಡುಕಾಟ ಆರಂಭಿಸಿದ್ರು. ಮಧ್ಯಾಹ್ನ ಡ್ರೋನ್ ಬಳಸಿ ಚಂದಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಇರುವ ಸ್ಥಳ ಪತ್ತೆ ಮಾಡಲಾಯಿತು.
ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆ ಆರಂಭವಾಗಿದ್ದು, 3:45ಕ್ಕೆ ವೈದ್ಯ ರಮೇಶ್ ಮೊದಲ ಅರವಳಿಕೆ ಚುಚ್ಚುಮದ್ದು ನೀಡಿದರು. ನಂತರ ಕಾಡಾನೆ ಕಾಫಿ ತೋಟ, ರೈತರ ಜಮೀನುಗಳಲ್ಲಿ ಓಡಾಡಿತು. ನಿತ್ರಾಣಗೊಳ್ಳದ ಹಿನ್ನೆಲೆ ಮತ್ತೊಮ್ಮೆ ಚುಚ್ಚುಮದ್ದು ನೀಡಲಾಯಿತು. ಎರಡೂ ಡೋಸ್ ಬಳಿಕವೂ ಕಾಡಾನೆ ಎರಡು ಗಂಟೆಗಳ ಕಾಲ ಓಡಾಡಿ ಸಂಜೆ 6:45ರ ಸುಮಾರಿಗೆ ಕುಸಿದು ಬಿದ್ದಿತು.
ಬಿದ್ದ ಬಳಿಕ ಸಾಕಾನೆಗಳ ಸಹಾಯದಿಂದ ಆರೈಕೆ ನೀಡಿ ರಿವರ್ಸಲ್ ಇಂಜೆಕ್ಷನ್ ನೀಡಲಾಯಿತು. ಎಚ್ಚರಗೊಂಡ ನಂತರ ಕುಮ್ಕಿ ಆನೆಗಳು ಸುತ್ತುವರೆದು ನಿಯಂತ್ರಿಸಿ, ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಯಿತು. ಕತ್ತಲಾದರೂ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರಿಂದ ಜನಸಮೂಹ ನಿಯಂತ್ರಣ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು.



