ವಿಜಯಸಾಕ್ಷಿ ಸುದ್ದಿ, ಗದಗ : ಧಾರವಾಡದ ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಬುಧವಾರ ನಗರದ ಬಾಲಕಿಯರ ಸರಕಾರಿ ಬಾಲ ಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ವಸತಿ, ಆಹಾರ ಪದಾರ್ಥಗಳು, ಕ್ರೀಡೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಪರಿಕರಗಳನ್ನು ಪರಿಶೀಲಿಸಿದರು. ಮಕ್ಕಳೊಂದಿಗೆ ಸಂವಾದ ಮಾಡಿ, ಮಕ್ಕಳ ಕುಶಲೋಪರಿ ವಿಚಾರಿಸಿದರು. ಮಕ್ಕಳ ಹವ್ಯಾಸಗಳು, ಮಕ್ಕಳ ವಿಶೇಷ ಪ್ರತಿಭೆಗಳ ಬಗ್ಗೆ ಚರ್ಚಿಸಿದರು.
ಮಕ್ಕಳಿಗೆ ಕೌಟುಂಬಿಕ ವಾತಾವರಣವನ್ನು ಸೃಷ್ಟಿಸುವುದು, ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವುದು ಮಕ್ಕಳೊಂದಿಗೆ ನಿರಂತರ ಸಮಾಲೋಚನೆ ಮಾಡುವುದು ಹಾಗೂ ಸೂಕ್ತ ಮಾರ್ಗದರ್ಶನ ನಿಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಬಾಲಮಂದಿರ ಕಟ್ಟಡ ವೀಕ್ಷಿಸಿ ಮಕ್ಕಳ ಹಿತದೃಷ್ಟಿಯಿಂದ ಕಾಂಪೌಂಡ್ ಅವಶ್ಯವಿದ್ದು, ಬೇಗನೆ ಅನುದಾನ ಬಿಡುಗಡೆಗೆ ಅನುಪಾಲನೆ ಮಾಡಲು ಸೂಚಿಸಿದರು. ಮಳೆಗಾಲದ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳು ಮಕ್ಕಳಿಗೆ ತಗುಲದಂತೆ ಎಚ್ಚರ ವಹಿಸಿ ಮತ್ತು ವಸತಿ ನಿಲಯದ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಬಾಲಕಿಯರ ಸರಕಾರಿ ಬಾಲಮಂದಿರದ ಅಧೀಕ್ಷಕರಾದ ಲಕ್ಷ್ಮಿ ಬಾಗೇವಾಡಿ, ಶಶಿಕಲಾ ಕವಲೂರು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣಕುಮಾರ ಬ.ಬೆಟಗೇರಿ, ರೂಪಾ ಎಸ್.ಉಪ್ಪಿನ್, ರವಿ ಉಮಚಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


