ಬೆಳಗಾವಿ: ಎಂಇಎಸ್ ಪುಂಡರ ಜೊತೆ ಸೆಲ್ಫಿ ತೆಗೆಸಿಕೊಂಡು ಸಿಪಿಐ ಓರ್ವರು ವಿವಾದಕ್ಕೆ ಸಿಲುಕಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆಗಾಗಿ ಬಂದಿದ್ದ ಎಂಇಎಸ್ ಪುಂಡರ ಜೊತೆ ಮಾಳ ಮಾರುತಿ ಠಾಣೆಯ ಸಿಪಿಐ ಜಾಕೀರ್ ಪಾಷಾ ಕಾಲಿಮಿರ್ಚಿ ಸೆಲ್ಫಿ ತೆಗೆದುಕೊಂಡು ವಿವಾದಕ್ಕೆ ಕಾರಣರಾಗಿದ್ದಾರೆ.
ಈ ಘಟನೆ ಬೆಳಗಾವಿಯ ಸಂಭಾಜಿ ಉದ್ಯಾನದಲ್ಲಿ ನಡೆದಿದೆ. ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಎಂಇಎಸ್ ಮುಖಂಡ ಶುಭಂ ಶೆಳಕೆ ಹಾಗೂ ಸಹಚರರ ಜೊತೆ ಸಿಪಿಐ ಪಾಷಾ ಸೆಲ್ಫಿ ತೆಗೆದುಕೊಂಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕೂಡಾ ಶುಭಂ ಶೆಳಕೆ ವಿರುದ್ಧ ಭಾಷಾ ಸಾಮರಸ್ಯ ಕೆಡಿಸುವ ಹೇಳಿಕೆ ಮತ್ತು ಶಾಂತಿ ಭಂಗದ ಆರೋಪದಡಿ ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರಾಳ ದಿನಾಚರಣೆಗೆ ಅನುಮತಿ ಇಲ್ಲದಿದ್ದರೂ ಎಂಇಎಸ್ ಪುಂಡರು ಲಿಲೇ ಮೈದಾನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಪಿಐ ನಡೆ ಕುರಿತು ತನಿಖೆ ನಡೆಸಬೇಕೆಂಬ ಬೇಡಿಕೆಗಳು ಕೇಳಿ ಬರುತ್ತಿವೆ.


