ಬೆಂಗಳೂರು: ನಂದಿನಿ ಬ್ರ್ಯಾಂಡ್ ಹೆಸರಲ್ಲಿ ಬೃಹತ್ ನಕಲಿ ತುಪ್ಪ ಮಾರಾಟ ಜಾಲವನ್ನು ಸಿಸಿಬಿ ಮತ್ತು ಕೆಎಂಎಫ್ ಜಂಟಿ ಕಾರ್ಯಾಚರಣೆ ನಡೆಸಿ ಭೇದಿಸಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕೆಎಂಎಫ್ (KMF) ಡಿಸ್ಟ್ರಿಬ್ಯೂಟರ್ ಮಹೇಂದ್ರ, ಪುತ್ರ ದೀಪಕ್, ಸಪ್ಲೈರ್‌ಗಳಾದ ಮುನಿರಾಜು ಹಾಗೂ ಅಭಿ ಅರಸು ಬಂಧಿತ ಆರೋಪಿಗಳು.
ಬೆಂಗಳೂರಿನಿಂದ ತಮಿಳುನಾಡಿಗೆ ಶುದ್ಧ ನಂದಿನಿ ತುಪ್ಪ ಪೂರೈಕೆ ಮಾಡುತ್ತಿದ್ದರು. ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಒರಿಜಿನಲ್ ತುಪ್ಪ ಖರೀದಿಸುತ್ತಿದ್ದರು. ಇಲ್ಲಿ ಖರೀದಿಸಿದ ಒರಿಜಿನಲ್ ತುಪ್ಪ ತಮಿಳುನಾಡಿಗೆ ಕಳುಹಿಸುತ್ತಿದ್ದರು. ಅದನ್ನ ತಮಿಳುನಾಡಿನಲ್ಲಿ ಕಲಬೆರಕೆ ಮಾಡುತ್ತಿದ್ದರು. ಒಂದು ಲೀಟರ್ ತುಪ್ಪಕ್ಕೆ 4 ಲೀಟರ್ ನಕಲಿ ತುಪ್ಪ ಬೆರೆಸುತ್ತಿದ್ದರು. ಫಾರ್ಮ್ ಆಯಿಲ್, ತೆಂಗಿನ ಎಣ್ಣೆ ಮತ್ತು ಡಾಲ್ಡಾ ಬೆರೆಸುತ್ತಿದ್ದರು. ಅದನ್ನ ಮತ್ತೆ ಕರ್ನಾಟಕಕ್ಕೆ ತಂದು ಮಾರಾಟ ಮಾಡುತ್ತಿದ್ದರು.
ಸದ್ಯ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್ಪ್ರೈಸಸ್ ಮಾಲೀಕರಿಗೆ ಸೇರಿದ ಗೋಡೌನ್ ಹಾಗೂ ಅಂಗಡಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಬರೋಬ್ಬರಿ 1.50 ಕೋಟಿ ರೂ. ಮೌಲ್ಯದ 8 ಸಾವಿರ ಲೀಟರ್ ನಕಲಿ ತುಪ್ಪವನ್ನು ಜಪ್ತಿ ಮಾಡಿದ್ದಾರೆ.


