ಗದಗ ಜಿಲ್ಲೆಯಲ್ಲಿ ಸರಣಿ ಕಳ್ಳತನ: ಸಿನಿಮೀಯ ಸ್ಟೈಲಲ್ಲಿ ಹಣ ದೋಚಿ ಎಸ್ಕೇಪ್, ಬೆಚ್ಚಿಬಿದ್ದ ಜನ!

0
Spread the love

ಗದಗ:- ಸಿನಿಮೀಯ ಸ್ಟೈಲಲ್ಲಿ ಒಂದೇ ರಾತ್ರಿ 3 ಗ್ರಾಮಗಳಲ್ಲಿ ಖದೀಮರು ಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ಗದಗ ಜಿಲ್ಲೆಯಲ್ಲಿ ಜರುಗಿದೆ.

Advertisement

ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಕಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಕಂಡು ಗದಗ ಜಿಲ್ಲೆಯ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಸಾಲು ಸಾಲು ದರೋಡೆ ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಹರಿಹಾಯ್ದಿತ್ತು. ಇದರ ಬೆನ್ನಲ್ಲೇ ಗದಗನಲ್ಲಿ ಒಂದೇ ರಾತ್ರಿ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಕಳ್ಳತನ ನಡೆದಿದ್ದು, ಗದಗ ಜಿಲ್ಲೆಯ ಮಂದಿ ಗಾಬರಿಗೊಂಡಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ 2025ರ ಜನವರಿ 22ರ ಬುಧವಾರದಂದು ಈ ಕಳ್ಳತನ ನಡೆದಿದ್ದು, ಒಂದೇ ರಾತ್ರಿಯಲ್ಲಿ ಒಟ್ಟು ಮೂರು ಗ್ರಾಮಗಳಲ್ಲಿ ಏಳು ಕಡೆ ಕಳ್ಳತನ ನಡೆದಿದೆ ಎನ್ನಲಾಗಿದೆ.

ಖದೀಮರು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ‌ ಎಸ್ಕೇಪ್ ಆಗಿದ್ದು, ತಮ್ಮ ಎಂಟತ್ತು ಜನರ ಗ್ಯಾಂಗ್ ಸಮೇತವಾಗಿಯೇ ದರೋಡೆ ನಡೆಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಿಂದ ಮುಂಡರಗಿ ಹೋಗುವ ಮಾರ್ಗದ ಗ್ರಾಮಗಳಲ್ಲಿ ಕಳ್ಳತನ ನಡೆಸಲಾಗಿದ್ದು, ಬೆಳ್ಳಟ್ಟಿ, ಬನ್ನಿಕೊಪ್ಪ, ಹಾಗೂ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮಗಳಲ್ಲಿ ಕಳ್ಳತನ ಹಾಗೂ ಕಳ್ಳತನಕ್ಕೆ ಯತ್ನ ನಡೆದಿದೆ.

ಬೆಳ್ಳಟ್ಟಿ ಗ್ರಾಮದಲ್ಲಿ ಎಗ್ ರೈಸ್ ಅಂಗಡಿ, ಪಾನ್ ಶಾಪ್ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಮುಂದೆ ಬನ್ನಿಕೊಪ್ಪ ಗ್ರಾಮದಲ್ಲಿ ಎರಡು ಪಾನ್ ಶಾಪ್ ಸೇರಿದಂತೆ ನಾಲ್ಕು ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಸಣ್ಣ ಪುಟ್ಟ ಅಂಗಡಿಗಳಾಗಿದ್ದರಿಂದ ಹೆಚ್ಚಿನ ವಸ್ತುಗಳಾಗಲಿ, ಹಣವಾಗಲಿ ಕಳ್ಳತನವಾಗಿಲ್ಲ ಎನ್ನಲಾಗಿದೆ.

ಆದರೆ ಇದೇ ಮಾರ್ಗದಲ್ಲಿ ಮುಂದಿನ ಗ್ರಾಮಕ್ಕೆ ಎಂಟ್ರಿ ಕೊಟ್ಟ ಖದೀಮರಿಗೆ, ದೊಡ್ಡ ಜಾಕ್ ಪಾಟ್ ಸಿಕ್ಕದಂತಾಗಿದೆ. ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಫೋಟೋಗ್ರಾಫರ್ ಶಾಂತಪ್ಪ ಕರಡಿ ಎಂಬುವರ ಮನೆ ಕಳ್ಳತನವಾಗಿದ್ದು, ಮನೆಯಲ್ಲಿದ್ದ 50 ಗ್ರಾಂ ಬಂಗಾರ ಆಭರಣ, ಸುಮಾರು 100 ಗ್ರಾಂ ಬೆಳ್ಳಿ ವಸ್ತುಗಳು, ಸೀರೆಗಳು ಮತ್ತು ನಗದು ಸೇರಿದಂತೆ ಒಟ್ಟು 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ.

ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಖದೀಮರು ಹೊಂಚು ಹಾಕಿದ್ದು, ಇದಾದ ಬಳಿಕ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿಯೂ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿರಹಟ್ಟಿ ಹಾಗೂ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here