ಗದಗ: ಗ್ರಾಮೀಣ ಠಾಣೆಯ ಪೊಲೀಸರು ಮನೆ ಕಳ್ಳತನ ಪ್ರಕರಣವನ್ನು ತ್ವರಿತವಾಗಿ ಭೇದಿಸಿ, ಆರೋಪಿಯನ್ನು ಬಂಧಿಸಿ ₹3.35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
2025 ಡಿಸೆಂಬರ್ 15ರಂದು ಹುಲಕೋಟಿ ಆಶ್ರಯ ಕಾಲೋನಿಯ ನಿವಾಸಿ ಹುಸೇನಸಾಬ್ ತಂದೆ ಹೊನ್ನೂರಸಾಬ್ ನದಾಪ್ (50) ಅವರು ಮನೆಯನ್ನು ಕೀಲಿ ಹಾಕಿ ಸ್ನೇಹಿತರ ಮನೆಯಲ್ಲಿ ಬೇಗತನ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಕಳ್ಳತನ ನಡೆದಿದೆ. ಮಧ್ಯಾಹ್ನ 1.45 ರಿಂದ ಸಂಜೆ 6.30ರ ನಡುವೆ ಕಳ್ಳರು ಮನೆ ಬಾಗಿಲಿನ ಕೀಲಿಯನ್ನು ಬಳಸಿ ಒಳನುಗ್ಗಿ, ಬೆಡ್‌ರೂಮ್‌ನಲ್ಲಿದ್ದ ಟ್ರೆಜರಿ ಚಾವಿಯನ್ನು ಪಡೆದು ಲಾಕರ್ ತೆರೆಯಲಾಗಿದೆ. ಇದರಿಂದ 23 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ₹2.30 ಲಕ್ಷ) ಹಾಗೂ ₹61,000 ನಗದು ಹಣ ಕಳವಾಗಿತ್ತು.
ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 278/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(3), 305 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ IPS ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಸಜ್ಜನ್ ಮತ್ತು ಡಿಎಸ್‌ಪಿ ಮುರ್ತುಜಾ ಖಾದ್ರಿ ಮಾರ್ಗದರ್ಶನದಲ್ಲಿ, ಪಿಐ ಸಿದ್ದರಾಮೇಶ್ವರ ಗಡೇದ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಪಿಎಸ್‌ಐ ಎಸ್.ಬಿ. ಕವಲೂರ್, ಸಿಬ್ಬಂದಿಗಳಾದ ಗಂಗಾಧರ ಮಜ್ಜಿಗೆ, ಪ್ರಕಾಶ್ ಗಾಣಿಗೇರ, ಮೆಹಬೂಬ್ ವದ್ದಟ್ಟಿ, ಅನಿಲ್ ಬನ್ನಿಕೊಪ್ಪ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್ ಬೂದಿಹಾಳ್ ಮತ್ತು ಸಂಜೀವ್ ರವರು ಇದ್ದರು.
ವೈಜ್ಞಾನಿಕ ತನಿಖೆ ಮತ್ತು ತಾಂತ್ರಿಕ ಮಾಹಿತಿ ಆಧಾರದ ಮೇಲೆ ಆರೋಪಿ ವಿ. ಮಹೇಶ್ ತಂದೆ ಗುರುಸ್ವಾಮಿ (32), ಹೊಸಪೇಟೆ ತಾಲ್ಲೂಕಿನ ನಿವಾಸಿಯನ್ನು ಬಂಧಿಸಲಾಗಿದೆ. ವಿಚಾರಣೆಯಲ್ಲಿ ಹುಲಕೋಟಿ ಹಾಗೂ ಲಕ್ಕುಂಡಿಯಲ್ಲಿನ ಇನ್ನೊಂದು ಮನೆ ಕಳ್ಳತನ ಪ್ರಕರಣವನ್ನೂ ಒಪ್ಪಿಕೊಂಡಿದ್ದಾನೆ.
ಎರಡೂ ಪ್ರಕರಣಗಳಿಂದ ಒಟ್ಟು 61 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ಮೌಲ್ಯ ₹3,35,000) ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಬಳ್ಳಾರಿ, ಹಾವೇರಿ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಗದಗ ಗ್ರಾಮೀಣ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮದಿಂದ ಈ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ತಂಡವನ್ನು ಎಸ್‌ಪಿ ರೋಹನ್ ಜಗದೀಶ್ ಅಭಿನಂದಿಸಿದ್ದಾರೆ. ಸಾರ್ವಜನಿಕರು ಮನೆಯನ್ನು ಖಾಲಿ ಮಾಡುವಾಗ ಹೆಚ್ಚಿನ ಭದ್ರತೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



