ಮಹೇಶ್ ಜೋಷಿಗೆ ಹಿನ್ನೆಡೆ: ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿ ನೇಮಿಸಿದ ರಾಜ್ಯ ಸರ್ಕಾರ!

0
Spread the love

ಬೆಂಗಳೂರು: ರಾಜ್ಯ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್‌ನ ಹಾಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರು ಹೊಸ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

Advertisement

ಈ ಕ್ರಮದಿಂದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಹೇಶ್ ಜೋಶಿಗೆ ತೀವ್ರ ಹಿನ್ನಡೆ ಸಂಭವಿಸಿದೆ. ಇನ್ನುಮುಂದೆ ಪರಿಷತ್‌ನ ಹಣಕಾಸು ವ್ಯವಹಾರಗಳು ಹಾಗೂ ಇತರೆ ಚಟುವಟಿಕೆಗಳನ್ನು ಆಡಳಿತಾಧಿಕಾರಿಯೇ ನೋಡಿಕೊಳ್ಳಲಿದ್ದಾರೆ.

ಮಹೇಶ್ ಜೋಶಿ ವಿರುದ್ಧ ಸಾಹಿತಿಗಳ ಒಂದು ವರ್ಗವು ಹಲವು ದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿತ್ತು. ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಜೊತೆಗೆ, ಸಿಎಂ ಸಿದ್ದರಾಮಯ್ಯ ಪರಿಷತ್‌ಗೆ ಬೆಂಬಲ ನೀಡುತ್ತಿಲ್ಲ ಎಂದು ಜೋಶಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದಾದ ನಂತರ ಅವರ ಭದ್ರತೆ ಹಾಗೂ ರಾಜ್ಯ ಸಚಿವರ ಸ್ಥಾನಮಾನವನ್ನೂ ಸರ್ಕಾರ ಹಿಂತೆಗೆದುಕೊಂಡಿತ್ತು.

ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸರ್ಕಾರವು ಪರಿಷತ್‌ಗೆ 2.50 ಕೋಟಿ ರೂ. ಅನುದಾನ ನೀಡಿತ್ತು. ಆದರೆ ಆ ಹಣದ ಬಳಕೆಯ ಪ್ರಮಾಣಪತ್ರವನ್ನು ಪರಿಷತ್ ಅಧ್ಯಕ್ಷರು ಜಿಲ್ಲಾಧಿಕಾರಿಗೆ ಸಲ್ಲಿಸಿಲ್ಲ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅನುದಾನವನ್ನು ನಿಬಂಧನೆಗಳಿಗೆ ಅನುಗುಣವಾಗಿ ಬಳಸದೇ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹೊರಡಿಸಲಾದ ಆದೇಶದ ಪ್ರಕಾರ, ಮುಂದಿನ ಮೂರು ತಿಂಗಳ ಅವಧಿಗೆ ಅಥವಾ ಸಂಬಂಧಿಸಿದ ವಿಚಾರಣೆ ಪೂರ್ಣಗೊಳ್ಳುವವರೆಗೂ ಆಡಳಿತಾಧಿಕಾರಿ ಅಧಿಕಾರದಲ್ಲಿರಲಿದ್ದಾರೆ. ಈ ಆದೇಶದ ಅನುಷ್ಠಾನ ಮಾನ್ಯ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ನಡೆಯಲಿದೆ ಎಂದು ಸರ್ಕಾರ ಹೇಳಿದೆ.


Spread the love

LEAVE A REPLY

Please enter your comment!
Please enter your name here