ಕೋಲ್ಕತ್ತಾ:- ಸ್ನೇಹಿತೆ ಮೇಲೆ ನಡೆಯುತ್ತಿದ್ದ ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ದುಷ್ಕರ್ಮಿಗಳ ಗುಂಪು ಕೊಲೆಗೈದಿರುವ ಘಟನೆ ಕೋಲ್ಕತ್ತಾದ ನ್ಯೂ ಟೌನ್ನಲ್ಲಿ ಜರುಗಿದೆ.
ಸಂಕೇತ್ ಚಟರ್ಜಿ ಕೊಲೆಯಾದ ದುರ್ದೈವಿ. ನಿರ್ಜನ ಪ್ರದೇಶದಲ್ಲಿ ಮೂವರು ಪುರುಷರ ಕಿರುಕುಳದಿಂದ ಸ್ನೇಹಿತೆಯನ್ನು ರಕ್ಷಿಸಲು ಪ್ರಯತ್ನಿಸಿದ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಆರೋಪಿಗಳು, ಬಿದಿರಿನ ದಿಮ್ಮಿಯಿಂದ ಸಂಕೇತ್ ಚಟರ್ಜಿ ತಲೆಗೆ ಹಲವು ಬಾರಿ ಹೊಡೆದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ತಲೆಗೆ ವೈದ್ಯರು ಹಲವಾರು ಹೊಲಿಗೆಗಳನ್ನು ಕೂಡ ಹಾಕಿದ್ದರು. ಕೆಲವು ಗಂಟೆಗಳ ಬಳಿಕ ನಿಧನರಾಗಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಸಂಕೇತ್ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ್ದ ಎಂಬುದು ತಿಳಿದುಬಂದಿದೆ. ಬೆಳಗಿನ ಜಾವ 1.30ಕ್ಕೆ ಅಪಾರ್ಟ್ಮೆಂಟ್ನಿಂದ ಯುವತಿ ಹೊರಬಂದು ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಮುಖ್ಯರಸ್ತೆಯ ಬಳಿ ಕುಳಿತಿದ್ದ ಮೂವರು, ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಅಲ್ಲದೇ ಆಕೆಯನ್ನು ಹಿಂಬಾಲಿಸಿದ್ದಾರೆ.
ಸ್ನೇಹಿತೆಯನ್ನು ಹುಡುಕುತ್ತಾ ಅಪಾರ್ಟ್ಮೆಂಟ್ನಿಂದ ಹೊರಬಂದ ಸಂಕೇತ್, ಪುರುಷರು ಆಕೆಗೆ ಕಿರುಕುಳ ನೀಡುತ್ತಿರುವುದನ್ನು ನೋಡಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದನು. ಸಂಕೇತ್ ತನ್ನ ಸ್ನೇಹಿತೆಗೆ ಸಹಾಯ ಮಾಡಲು ಪ್ರಯತ್ನಿಸಿದಾಗ ಮತ್ತು ಆಕೆಗೆ ಕಿರುಕುಳ ನೀಡುವುದನ್ನು ತಡೆಯಲು ಹೋದಾಗ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಂಕೇತ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.