ಯುವ ಜನಾಂಗಕ್ಕೆ ಇತಿಹಾಸದ ಅರಿವು ಅವಶ್ಯಕ : ರಂಭಾಪುರಿ ಶ್ರೀಗಳು

0
Sharannavaratri Dussehra Dharma Conference 4th Day Ceremony
????????????????????????????????????
Spread the love

ವಿಜಯಸಾಕ್ಷಿ ಸುದ್ದಿ, ಅಬ್ಬಿಗೇರಿ : (ಮಾನವ ಧರ್ಮ ಮಂಟಪ) 
  ರಾಷ್ಟ್ರದ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ಶಕ್ತಿ ಯುವ ಜನಾಂಗದಲ್ಲಿದೆ. ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಮಾಜವನ್ನು ಕಟ್ಟಿ ಬೆಳೆಸುವುದರಲ್ಲಿ ಯುವ ಜನಾಂಗ ಗಟ್ಟಿಯಾದ ಹೆಜ್ಜೆಯನ್ನಿಡಬೇಕಾಗಿದೆ. ಯುವ ಶಕ್ತಿ ಈ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ ಎಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ರವಿವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನೀತಿ ನಿಯಮವಿಲ್ಲದೇ ಸಮಾಜ, ನಾಡು ಬೆಳೆಯಲಾರದು. ಯುವ ಜನಾಂಗಕ್ಕೆ ಇತಿಹಾಸದ ಅರಿವು, ಆದರ್ಶಗಳ ಪರಿಜ್ಞಾನ ಅವಶ್ಯಕ. ವರ್ತಮಾನ-ಭವಿಷ್ಯತ್ತುಗಳಿಗೆ ಇತಿಹಾಸ ನಾಂದಿ. ಬೆಳೆಯುವ ಯುವ ಜನಾಂಗದಲ್ಲಿ ವೈಚಾರಿಕತೆ ಇರಲಿ. ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಸದ್ಭಾವನೆಗಳು ಬೆಳೆಯದಿರುವುದೇ ಇಂದಿನ ಹಲವಾರು ಆವಾಂತರಗಳಿಗೆ ಕಾರಣ. ಮನುಷ್ಯನ ಬುದ್ಧಿಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಧರ್ಮದಿಂದ ಭಾವಶಕ್ತಿ ಬೆಳೆಯಬೇಕು. ಶಿಕ್ಷಣದಿಂದ ಬುದ್ಧಿಶಕ್ತಿ ಬೆಳೆಯಬೇಕು ಎಂದರು.
ಕಲಬೆರಕೆ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯ ಕೆಡುತ್ತಿದೆ. ಆಹಾರವೇ ಔಷಧವಾಗಬೇಕಲ್ಲದೇ ಔಷಧಿಯೇ ಆಹಾರವಾಗಬಾರದು. ಆರೋಗ್ಯ ಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಶ್ರೇಷ್ಠ ಸಂಪತ್ತು. ಆರೋಗ್ಯ ಸೂತ್ರಗಳನ್ನು ಪರಿಪಾಲಿಸಿ ಜೀವನದಲ್ಲಿ ಮುನ್ನಡೆಯಬೇಕು. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಆಧ್ಯಾತ್ಮದ ಅರಿವು, ಆಚರಣೆ ಮುಖ್ಯವೆಂದ ಶ್ರೀಗಳು, ನವರಾತ್ರಿಯ 4ನೇ ದಿನ ಕೂಷ್ಮಾಂಡಾ ದೇವಿ ಅರಾಧನೆಯಿಂದ ದೈವಿಕ ಇಚ್ಛೆಗಳು ಕೈಗೂಡುತ್ತವೆ. ಪ್ರಗತಿ ಮತ್ತು ಅಭ್ಯುದಯ ಪ್ರಾಪ್ತವಾಗುತ್ತದೆ ಎಂದರು.
ಬೆಳಗಾವಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಭಾರತದ ಉಸಿರು ಧರ್ಮ ಮತ್ತು ಭಾವೈಕ್ಯತೆ. ಭಾರತೀಯ ಸಂಸ್ಕೃತಿ ಎಲ್ಲರನ್ನು ಒಗ್ಗೂಡಿಸುವುದಾಗಿದೆಯೇ ಹೊರತು ವಿಘಟಿಸುವುದಲ್ಲ. ದೇಶ ಉಳಿದರೆ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಸಂಚರಿಸಿ ಧರ್ಮ ಪ್ರಜ್ಞೆ ಉಂಟು ಮಾಡುವುದಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ದೇವಾಪುರ-ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮಳಲಿ ಸಂಸ್ಥಾನಮಠದ ಡಾ.ಗುರುನಾಗಭೂಷಣ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು.
‘ಆಹಾರ-ಆರೋಗ್ಯ ಮತ್ತು ಆಧ್ಯಾತ್ಮ’ ಕುರಿತು ಉಪನ್ಯಾಸ ನೀಡಿದ ರಾಯಚೂರಿನ ಡಾ. ಅರುಣಾ ಹಿರೇಮಠ ಮಾತನಾಡಿ, ಜೀವನ ಶ್ರೇಯಸ್ಸಿಗೆ ಮತ್ತು ನೆಮ್ಮದಿಯ ಬದುಕಿಗೆ ಇವು ಮೂರು ಬಹಳ ಮುಖ್ಯ. ಆರೋಗ್ಯ ಒಂದಿದ್ದರೆ ಏನನ್ನಾದರೂ ಸಂಪಾದಿಸಲು ಸಾಧ್ಯ. ಸಾತ್ವಿಕ ಬದುಕು ರೂಪುಗೊಳ್ಳಲು ಸೇವಿಸುವ ಆಹಾರ ಮುಖ್ಯ.
ಜೀವನದಲ್ಲಿ ಒಂದಿಷ್ಟಾದರೂ ಆಧ್ಯಾತ್ಮ ಸಾಧನೆಯನ್ನು ಮಾಡಿಕೊಂಡು ನಡೆದರೆ ಬದುಕು ಹಸನಾಗುವುದರಲ್ಲಿ ಸಂದೇಹ ಇಲ್ಲವೆಂದರು. ಮುಖ್ಯ ಅತಿಥಿಗಳಾಗಿ  ವಿಜಯ ಬಾಬಣ್ಣ ಮೆಟಗುಡ್ಡ ಭಾಗವಹಿಸಿದ್ದರು.
ವೀರಾಪುರ-ಕಲಕೇರಿ ಮುದಕೇಶ್ವರ ಶಿವಾಚಾರ್ಯರು ಸ್ವಾಮಿಗಳು, ಎಲೆರಾಂಪುರ ಡಾ. ಹನುಮಂತನಾಥ ಸ್ವಾಮಿಗಳು, ಯಂಕಂಚಿ ರುದ್ರಮುನಿ ಶಿವಾಚಾರ್ಯರು, ಕಲಾದಗಿ ಗಂಗಾಧರ ಶಿವಾಚಾರ್ಯರು, ಇಟಗಿ-ನಿಡಗುಂದಿ ಷಣ್ಮುಖಪ್ಪಜ್ಜನವರು ಧರ್ಮರಮಠ, ಡಾ. ಆರ್.ಬಿ. ಬಸವರೆಡ್ಡೇರ್, ವೇ. ಷಣ್ಮುಖಯ್ಯ ಶಾಸ್ತ್ರಿಗಳು ಹಿರೇಮಠ, ಅಬ್ಬಿಗೇರಿ, ಮಾರುತಿ ಬಂಡಿವಡ್ಡರ್, ಸೂಡಿಯ ಶಿವಾನಂದಯ್ಯ ಲಿಂ. ಜುಕ್ತಿಹಿರೇಮಠ, ರುದ್ರಪ್ಪ ಸಂ.ಮಾರನಬಸರಿ, ಮಲ್ಲನಗೌಡ್ರು ಪ.ದೇಸಾಯಿ, ಪರತಪ್ಪ ಶಿ.ಪಟ್ಟಣಶೆಟ್ಟಿ ಹಾಗೂ ಶರಣಪ್ಪ ಈ.ನರಗುಂದ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಕೊತಬಾಳದ ಶ್ರೀ ಅರುಣೋದಯ ಕಲಾ ತಂಡದವರು ಜಾನಪದ ನೃತ್ಯ ಪ್ರದರ್ಶಿಸಿದರು.
  ಅಬ್ಬಿಗೇರಿಯ ಶಿಕ್ಷಕ ಮಲ್ಲಿಕಾರ್ಜುನ ಗುಗ್ಗರಿ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಪಾರ್ವತಿ ಮಹಿಳಾ ಬಳಗ ಹುಬ್ಬಳ್ಳಿ ಇವರಿಂದ ಸಂಗೀತ ಜರುಗಿತು. ಸುರೇಶ ಬೆನಕಟ್ಟಿ ತಬಲಾ ಸಾಥ ನೀಡಿದರು. ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆಯಿತು.
 ಪ್ರಶಸ್ತಿ ಪ್ರದಾನ
ದಾವಣಗೆರೆಯ ಹೆಚ್.ಎಂ. ಬಸವರಾಜಯ್ಯ (ಅಕ್ಕಿ ರಾಜು) ಇವರಿಗೆ `ರಂಭಾಪುರಿ ಯುವಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಬಸವನಬಾಗೇವಾಡಿ ಶಿವಪ್ರಕಾಶ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.
ನಜರ್ ಸಮರ್ಪಣೆ
ಸಮಾರಂಭದ ನಂತರ ನಜರ್ ಸಮರ್ಪಣೆ ನಡೆಯಿತು. ಶ್ರೀ ಪೀಠದ ಸಿಬ್ಬಂದಿ ಹಾಗೂ ಪೀಠಾಭಿಮಾನಿಗಳು, ಆನೆ ಗಜಲಕ್ಷ್ಮಿ ಹಾಗೂ ಹಗಲು ದೀವಟಿಗೆಯವರು ಸಲ್ಲಿಸಿದ ನಜರ್ ಸಮರ್ಪಣೆ ಆಕರ್ಷಕವಾಗಿತ್ತು. ಫಾಲಾಕ್ಷಯ್ಯ ಅರಳೆಲೆಮಠ, ಬಸವರಾಜ ವೀರಾಪುರ, ಮಲ್ಲಿಕಾರ್ಜುನ ವೀರಾಪುರ ಸುರೇಶ ವೀರಾಪುರ, ಹಾಗೂ ಸತೀಶ ಪ್ರ. ವೀರಾಪುರ ಇವರಿಂದ ಅನ್ನ ದಾಸೋಹದ ಸೇವೆ ಜರುಗಿತು.
Advertisement
ಶುದ್ಧ ಹೃದಯವು ಭಗವಂತನ ದರ್ಶನಕ್ಕೆ ಹೋಗುವ ಹೆಬ್ಬಾಗಿಲು. ಮನುಷ್ಯ ದೇವರು ಮತ್ತು ಧರ್ಮವನ್ನು ಮರೆಯಬಾರದು. ನಿರಂತರ ಕ್ರಿಯಾಶೀಲತೆಯಿಂದ ಜೀವನ ಉಜ್ವಲಗೊಳ್ಳುವುದು. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಸಮ್ಮೇಳನ ಜೀವನ ವಿಕಾಸದ ಶ್ರೇಯಸ್ಸಿಗೆ ಕಾರಣವಾಗಿದೆ. ಸಮಾಜದ ಒಳ ಪಂಗಡಗಳ ಭೇದ ದೂರವಾಗಬೇಕು. ವೀರಶೈವ ಲಿಂಗಾಯತ ಎರಡೂ ಒಂದೇ ಎಂಬುದನ್ನು ಮರೆಯಬಾರದು.
– ಡಾ. ವಿಜಯ ಸಂಕೇಶ್ವರ.
ವ್ಹಿಆರ್‌ಎಲ್ ಸಂಸ್ಥೆಯ ಚೇರಮನ್,
ಮಾಜಿ ಸಂಸದರು.
ನೇತೃತ್ವ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಬಹು ಜನ್ಮದ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಜೀವನ ಅಭ್ಯುದಯಕ್ಕೆ ಕಾರಣವಾಗಿರುವ ಧರ್ಮಾಚರಣೆಯನ್ನು ಮರೆಯಬಾರದು. ಬುದ್ಧಿ ಭಾವನೆಗಳ ಪರಿಶುದ್ಧತೆಯಿಂದ ಬಾಳು ಉಜ್ವಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಕಾರ್ಯಗಳು ನಡೆಯುತ್ತಿವೆ ಎಂದರು. 

Spread the love

LEAVE A REPLY

Please enter your comment!
Please enter your name here