ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಈ ದೇಶದ ಭವಿಷ್ಯವನ್ನು ಬದಲಿಸುವ ಶಕ್ತಿ ಶಿಕ್ಷಕರಲ್ಲಿ ಮಾತ್ರ ಇದೆ. ಸಮಾಜದ ನಿರೀಕ್ಷೆಯಂತೆ ಶಾಲೆಯ ಒಳಗೂ ಹಾಗೂ ಹೊರಗೂ ನೈತಿಕ ಪ್ರಜ್ಞೆಯಿಂದ ವ್ಯವಹರಿಸಬೇಕು.
ಶಿಕ್ಷಕರಾದವರು ಉತ್ತಮ ಸಮಾಜದ ನಿರ್ಮಾತೃಗಳಾಗಿದ್ದು, ಅಪೇಕ್ಷಿತ ಮೌಲ್ಯದಂತೆ ವಿದ್ಯಾದಾನದ ವೃತಧಾರಕರಾಗಿರಬೇಕು ಎಂದು ಶಿರಹಟ್ಟಿ ಸಂಸ್ಥಾನಮಠದ ಉತ್ತರಾಧಿಕಾರಿಗಳಾದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು.
ಅವರು ಗುರುವಾರ ಪಟ್ಟಣದ ಶ್ರೀ ರಂಭಾಪುರಿ ವೀರಗಂಗಾಧರ ಕಲ್ಯಾಣಮಂಟಪದಲ್ಲಿ ಜಿ.ಪಂ ಗದಗ, ತಾಲೂಕಾಡಳಿತ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮದಿನಾಚರಣೆ ಪ್ರಯುಕ್ತ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆತ್ಮಸಾಕ್ಷಿಯಿಂದ ಯಾವ ಶಿಕ್ಷಕ ಸೇವೆ ಸಲ್ಲಿಸುತ್ತಾನೆಯೋ ಅವರೇ ನಿಜವಾದ ಶಿಕ್ಷಕರು, ಬ್ರಹ್ಮ ಬಿಟ್ಟಿರುವ ಪದಗಳನ್ನು ತುಂಬುವ ಶಕ್ತಿ ಇರುವದು ಶಿಕ್ಷಕರಲ್ಲಿ ಮಾತ್ರ. ನಿಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿ ತಂದೆ-ತಾಯಿಯನ್ನು ಮರೆತರೂ ಸಹ ಕಲಿಸಿದ ಶಿಕ್ಷಕರನ್ನು ಮರೆಯುವಂತಿರಬಾರದು ಎಂದು ನುಡಿದ ಶ್ರೀಗಳು, ವೃತ್ತಿ ಧರ್ಮಕ್ಕೆ ದ್ರೋಹ ಮಾಡದೆ ಮಕ್ಕಳ ಭವಿಷ್ಯ ರೂಪಿಸುವ ಮಹಾನ್ ಕಾಯಕವನ್ನು ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಬಹು ಗೌರವ ಸ್ಥಾನವನ್ನು ನೀಡಲಾಗುತ್ತಿದ್ದು, ಶಿಕ್ಷಕ ವೃತ್ತಿಯಲ್ಲಿ ಸೇವೆ ಮಾಡುವವರು ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಹೋಗುವದರ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ದೇಶದ ಭವಿಷ್ಯಕ್ಕಾಗಿ ಸಮರ್ಥ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿ ಉದಾತ್ತ ಮಾನವೀಯ ಮೌಲ್ಯಗಳಿಂದ ಕೂಡಿದ್ದು, ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸುವ ನೈತಿಕತೆ ಅಗತ್ಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೇಶ್ವರ ತಹಸೀಲ್ದಾರ ವಾಸುದೇವ ಸ್ವಾಮಿ, ಶಿರಹಟ್ಟಿ ತಹಸೀಲ್ದಾರ ಅನಿಲ ಬಡಿಗೇರ, ಲಕ್ಷ್ಮೇಶ್ವರ ಇಓ ಕೃಷ್ಣಪ್ಪ ಧರ್ಮರ, ಶಿರಹಟ್ಟಿ ಇಓ ಎಸ್.ಎಸ್. ಕಲ್ಮನಿ, ಪ.ಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಮುಖ್ಯಾಧಿಕಾರಿ ಮಹೇಶ ಹಡಪದ, ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಸದಸ್ಯರಾದ ಪ್ರವೀಣ ಬಾಳಿಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಅಕ್ಷರ ದಾಸೋಹ ನಿರ್ದೆಶಕ ರಾಮನಗೌಡ್ರ, ಮಂಜುನಾಥ ಕೊಕ್ಕರಗುಂದಿ, ಡಿ.ಎಚ್. ಪಾಟೀಲ, ಬಿ.ಎಸ್. ಹರ್ಲಾಪೂರ, ಹಾಗೂ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ಶಿಕ್ಷಕರು ಹಾಜರಿದ್ದರು. ಈಶ್ವರ ಮೇಡ್ಲೇರಿ, ಸತೀಶ ಬೋಮಲೆ, ಎಚ್.ಡಿ. ನಿಂಗರಡ್ಡಿ ನಿರೂಪಿಸಿದರು.
ಶಿಕ್ಷಕರಾದವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು. ಸಮಾಜ ಅಪೇಕ್ಷಿಸುವ ರೀತಿಯಲ್ಲಿ ನೈತಿಕ ನೆಲೆಗಟ್ಟಿನ ಮೇಲೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ತಾಲೂಕಿನ ಬಹುತೇಕ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಶಾಸಕರ ಅನುದಾನದಲ್ಲಿ ಆದ್ಯತೆಯ ಮೇರೆಗೆ ಸೌಲಭ್ಯ ಒದಗಿಸುವದಾಗಿ ಶಾಸಕ ಡಾ. ಚಂದ್ರು ಲಮಾಣಿ ಭರವಸೆ ನೀಡಿದರು.