ಬೆತ್ತದ ಅಜ್ಜನವರ ಕಾರ್ಯಗಳು ವರ್ಣನಾತೀತ : ಗಿರಿರಾಜ ಹೊಸಮನಿ

0
Shivanubhava Concert at Sri Annadaneshwar Shivanubhava Mandapam
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಹಾಲಕೆರೆಯ ಶ್ರೀ ಗುರು ಅನ್ನದಾನ ಮಹಾಸ್ವಾಮಿಗಳು ಅರ್ಥಾತ್ ಬೆತ್ತದ ಅಜ್ಜನವರ ಕಾರ್ಯಗಳನ್ನು ವರ್ಣಿಸಲು ಶಬ್ದಗಳೇ ಸಿಗದು. ಯಾವುದೇ ಅನುಕೂಲತೆ ಇಲ್ಲದ ಕಾಲದಲ್ಲಿ ಅವರು ಮಾಡಿದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ನೆನೆಸಿಕೊಂಡರೆ ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಇಷ್ಟೊಂದು ಕಾರ್ಯಗಳನ್ನು ಮಾಡಲು ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ ಎಂದು ಲೇಖಕ ಗಿರಿರಾಜ ಹೊಸಮನಿ ಹೇಳಿದರು.

Advertisement

ಪಟ್ಟಣದ ಶ್ರೀ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ ಪುನಃ ಪ್ರಾರಂಭವಾದ 51ನೇ ಶಿವಾನುಭವ ಗೋಷ್ಠಿಯಲ್ಲಿ ಅವರು ಲಿಂ. ಗುರು ಅನನದಾನ ಮಹಾಸ್ವಾಮಿಗಳವರ ಶಿಕ್ಷಣ ಪ್ರೇಮ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

1915ರಲ್ಲಿ ಅವರು ಸಂಸ್ಕೃತ ಪಾಠಶಾಲೆಯನ್ನು ಹಾಲಕೆರೆಯಲ್ಲಿ ತೆರೆದರು. ಇದು ಉತ್ತರ ಕರ್ನಾಟಕದಲ್ಲಿ ಆಗಿನ 3ನೇ ಸಂಸ್ಕೃತ ಶಾಲೆಯಾಗಿತ್ತು. 3ನೇ ತರಗತಿಯವರೆಗೆ ಮಾತ್ರ ಕಲಿತಿದ್ದ ಶ್ರೀಗಳಿಗೆ ಶಿಕ್ಷಣದ ಮಹತ್ವದ ಅರಿವಿತ್ತು, ಆ ಬಗೆಗಿನ ದೂರದೃಷ್ಟಿಯಿತ್ತು. 1946ರಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಇದರಿಂದ ಗ್ರಾಮೀಣ ಮಕ್ಕಳಿಗೆ ಗಗನ ಕುಸುಮವಾಗಿದ್ದ ಶಿಕ್ಷಣ ಕೈಗೆಟಕುವಂತಾಯಿತು. ವಿದ್ಯಾರ್ಥಿಗಳು ಕಲಿಯಲಿ, ಅವರಿಗೆ ಊಟದ ತೊಂದರೆಯಾಗದಿರಲಿ ಎಂದು 12 ಊರುಗಳಲ್ಲಿ ಪ್ರಸಾದ ನಿಲಯಗಳನ್ನು ಪ್ರಾರಂಭಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟ ದೇವರು ಅವರು ಎಂದು ಹೊಸಮನಿ ಹೇಳಿದರು.

ಅಜ್ಜನವರು ಎಲ್ಲರಲ್ಲಿಯೂ ದೇವರನ್ನು ಕಂಡವರು. ಶೂನ್ಯದಿಂದ ಸ್ವರ್ಗವನ್ನು ನಿರ್ಮಾಣ ಮಾಡಿದ ಮಹನೀಯರು ಅವರು. ಹಾಲಕೆರೆ ಶ್ರೀಮಠದ ಗುರು ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಇವರ ಹಿಂದೆ ಇದ್ದ ಗಡ್ಡದ ಅಜ್ಜನವರು ಶಿವಯೋಗದ ಸಾಮ್ರಾಟರಾದರೆ, ಈಚೆಗೆ ಲಿಂಗೈಕ್ಯರಾದ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು 20 ವರ್ಷ ಶಿವಯೋಗ ಮಂದಿರವನ್ನು ಸಮರ್ಥವಾಗಿ ನಡೆಸಿದವರು. ಹಾಲಕೆರೆ ಮಠವಿಲ್ಲದೆ ಶಿವಯೋಗ ಮಂದಿರವಿಲ್ಲ ಎನ್ನುವ ಮಾತನ್ನು ರುಜುವಾತು ಪಡಿಸಿದವರು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಮಾತನಾಡಿ, ಶಿವಾನುಭವ ಜೀವಕ್ಕೆ ಸಂತೋಷ ಮತ್ತು ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ. ಶಿವಾನುಭವದಿಂದ ಅನೇಕರು ಶರಣರೇ ಆಗಿದ್ದಾರೆ.

ನಿಮ್ಮ ಜೀವನದ ದಿಕ್ಕನ್ನು ಬದಲಿಸಿ ನಿಮ್ಮನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವಲ್ಲಿ ಶಿವಾನುಭವದ ಪಾತ್ರ ದೊಡ್ಡದೆಂದು ತಿಳಿದು ನಾವು ಮತ್ತೆ ಶಿವಾನುಭವವನ್ನು ಪ್ರಾರಂಭಿಸಿದ್ದೇವೆ. ಪ್ರತಿ ತಿಂಗಳ ಕೊನೆಯ ದಿನದಂದು ಈ ಶಿವಾನುಭವ ಸಂಪದ ಇಲ್ಲಿ ನಡೆಯುತ್ತದೆ. ಇದರ ಸದುಪಯೋಗವನ್ನು ನೀವುಗಳೆಲ್ಲ ಪಡೆದುಕೊಳ್ಳಬೇಕೆಂದು ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.

ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಶಿಕ್ಷಕ ಬಿ.ಎಸ್. ಗಾಣಿಗೇರ ವಂದಿಸಿದರು.

ಶಿವಾನುಭವ ಗೋಷ್ಠಿಯಲ್ಲಿ ಹಾಲಕೆರೆ ಶ್ರೀಮಠದ ಸದ್ಭಕ್ತರು, ನಿವೃತ್ತ ಶಿಕ್ಷಕ ಎಂ.ಎ. ಹಿರೇವಡೆಯರ, ಡಾ. ಎಲ್.ಎಸ್. ಗೌರಿ, ಮುಖ್ಯ ಶಿಕ್ಷಕ ಪ್ರಭುಸ್ವಾಮಿಮಠ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಗಿಮಠ, ಎಂ.ಎಸ್. ದಢೇಸೂರಮಠ, ಡಾ. ಆರ್.ಕೆ. ಗಚ್ಚಿನಮಠ, ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಮುಖ್ಯಸ್ಥರು ಹಾಜರಿದ್ದರು.

ಆಗಿನ ದಿನಗಳಲ್ಲಿ ಧಾರವಾಡವನ್ನು ಹೊರತುಪಡಿಸಿದರೆ ಈ ಭಾಗದ ಜನರಿಗೆಲ್ಲ ಶೈಕ್ಷಣಿಕ ಕೇಂದ್ರವೆಂದರೆ ಅದು ನರೇಗಲ್ಲ ಪಟ್ಟಣವಾಗಿತ್ತು. ಅಜ್ಜನವರ ಶೈಕ್ಷಣಿಕ ಸಂಸ್ಥೆಯಾಗಿತ್ತು. ತಮ್ಮ ಬೆತ್ತವನ್ನು ಹಿಡಿದುಕೊಂಡು, ಜೋಳಿಗೆ ಹಾಕಿಕೊಂಡು ಭಿಕ್ಷೆಗೆ ಹೊರಟರೆ ಅಜ್ಜನವರು ಬರಿಗೈಯಲ್ಲಿ ಬಂದ ಉದಾಹರಣೆಗಳಿಲ್ಲ. ಸಜ್ಜಲಗುಡ್ಡದ ಶರಣಮ್ಮನವರನ್ನು ತಮ್ಮ ಕೃಪಾದೃಷ್ಟಿಯಲ್ಲಿಟ್ಟುಕೊಂಡು ಸಲುಹಿದ ದಿವ್ಯ ಚೇತನ ಬೆತ್ತದ ಅಜ್ಜನವರು. ಅವರ ಈ ಕಾರ್ಯವನ್ನು ಇಂದಿನ ಪೀಠಾಧಿಪತಿಗಳಾಗಿರುವ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ. ತಮ್ಮ ಗುರುಗಳಿಂದ ಪ್ರಾರಂಭಗೊAಡಿದ್ದ ಶಿವಾನುಭವವನ್ನು ಮತ್ತೆ ಪುನರ್ ಪ್ರಾರಂಭ ಮಾಡಿದ್ದು ಅವರ ಗುರುವಿನ ಪ್ರೀತಿಯನ್ನು ತೋರುತ್ತದೆ ಎಂದು ಗಿರಿರಾಜ ಹೊಸಮನಿ ಹೇಳಿದರು.

 


Spread the love

LEAVE A REPLY

Please enter your comment!
Please enter your name here