ವಿಜಯಸಾಕ್ಷಿ ಸುದ್ದಿ, ನರೇಗಲ್ : ನಮ್ಮ ನಾಡಿನಲ್ಲಿ ಮಠಗಳು ಮತ್ತು ಮಠಾಧೀಶರು ಸಮಾಜದ ಉದ್ಧಾರಕ್ಕಾಗಿ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಕಾರ್ಯಗಳ ಮೂಲಕ ಅವರು ಭಕ್ತ ಸಮೂಹದಲ್ಲಿ ಸಂಸ್ಕೃತಿಯನ್ನು ಧಾರೆ ಎರೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಶ್ರಾವಣ ಮಾಸದ 2ನೇ ಸೋಮವಾರ ಬೆಳ್ಳಿ ರಥಕ್ಕೆ ಚಾಲನೆ ನೀಡಿದ ನಂತರ ನಡೆದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯರನ್ನು ಗೌರವಿಸುವ ಗುಣ ನಮ್ಮ ಸಂಸ್ಕೃತಿಯಲ್ಲಿಯೇ ಇದೆ. ಇನ್ನೂ ನೂರು ವರ್ಷಗಳ ಕಾಲ ನಮ್ಮ ಸಂಸ್ಕೃತಿಗೆ ಯಾರಿಂದಲೂ ಯಾವುದೇ ಧಕ್ಕೆ ಇಲ್ಲ. ಭಾರತದ ಸಂಸ್ಕೃತಿ ಅದ್ವಿತೀಯವಾದದ್ದು. ಈ ಸಂಸ್ಕೃತಿಯನ್ನು ನಮಗೆ ನೀಡಿದವರು ಮಠಾಧೀಶರು. ಈ ಸಂಸ್ಕೃತಿಗಾಗಿಯೆ ಇಡೀ ಜಗತ್ತು ನಮ್ಮ ಕಡೆಗೆ ನೋಡುತ್ತಿದೆ. ಇದು ಭಾರತದ ಹೆಮ್ಮೆ ಎಂದು ಹೆಬ್ಬಾಳ್ಕರ್ ನುಡಿದರು.
ಸಂಸ್ಕೃತಿ ಕೇವಲ ಹೆಂಗಸರಿಗೆ ಮಾತ್ರ ಸೀಮಿತವಲ್ಲ. ಗಂಡಸರೂ ಸಹ ಸಂಸ್ಕೃತಿಯನ್ನು ಕಲಿಯಬೇಕು. ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನು ಬಿಡಬೇಕು. ಮಹಿಳೆಯರು ಆರ್ಥಿಕ ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಬೇಕು. ತಮ್ಮಲ್ಲಿ ಧೈರ್ಯವನ್ನು ಬೆಳೆಸಿಕೊಂಡು ಮುನ್ನುಗ್ಗಿದಾಗ ಹೆಣ್ಣಿಗೆ ಸಿಗಬೇಕಾದ ಗೌರವಗಳು ಸಿಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನೀಲಗುಂದದ ಪ್ರಭುಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಲಿಂಗ ಪೂಜೆಯಿಂದ ಜಗದ ಹಂಗು ಹರಿಯುತ್ತದೆ. ಲಿಂಗ ಪೂಜೆ ಎಂದರೆ ಲಿಂಗದಲ್ಲಿ ನಮ್ಮನ್ನು ನಾವು ನೋಡಿಕೊಳ್ಳುವುದೆಂದರ್ಥ. ಸ್ವಾರ್ಥದ ಚಿಂತೆ ಇಲ್ಲದವರಿಗೆ ಪರಾರ್ಥದ ಚಿಂತೆಯೂ ಬರುವುದಿಲ್ಲ. ಆದ್ದರಿಂದ ನೀವು ನಿಮ್ಮ ನಿತ್ಯದ ಬದುಕಿನೊಂದಿಗೆ ಆಧ್ಯಾತ್ಮದ ಒಲವನ್ನೂ ಬೆಳೆಸಿಕೊಳ್ಳಿ ಎಂದು ಹೇಳಿದರು.
ಶಿವಾನುಭಗೋಷ್ಠಿಯ ದಿವ್ಯ ಸಾನ್ನಿಧ್ಯವನ್ನು ವಳಬಳ್ಳಾರಿಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ನೇತೃತ್ವವನ್ನು ಸಂತೆಕೆಲ್ಲೂರಿನ ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆಯ ಮೇಲೆ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು, ಅನ್ನಪೂರ್ಣಮ್ಮ ಪಾಟೀಲ, ಉಪನ್ಯಾಸಕಿ ವೀಣಾ ಪಾಟೀಲ, ಸಂಯುಕ್ತ ಬಂಡಿ, ಕದಿರಿ ಶ್ರೀರೀತಾ ಮತ್ತು ಹಿರಿಯ ತಾಯಂದಿರು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಡಾ. ರತ್ನಾ ಪಾಟೀಲ ನಿರೂಪಿಸಿದರು. ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಸ್ವಾಗತಿಸಿದರು. ನಂತರ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಂಗ ಸಂಸ್ಥೆಗಳ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಶ್ರೀಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, ಲಿಂಗ ಪೂಜೆ ಮೂಲಕ ಗುರು ಅನ್ನದಾನ ಮಹಾಸ್ವಾಮಿಗಳವರು ಎಲ್ಲವನ್ನೂ ಸಾಧಿಸಿದರು. ಯಾವುದೇ ಲೌಕಿಕ ಬೇಡಿಕೆಯನ್ನಿಟ್ಟುಕೊಂಡು ಲಿಂಗಪೂಜೆ ಮಾಡಬಾರದು. ನಿಸ್ವಾರ್ಥ ಮನೋಭಾವನೆಯಿಂದ ಲಿಂಗ ಪೂಜೆ ಮಾಡಿದರೆ ಭಗವಂತ ಬೇಡಿದ್ದನ್ನು ನೀಡುತ್ತಾನೆ. ಲಿಂಗ ಪೂಜೆ ಮಾಡುತ್ತ ಲಿಂಗವೇ ತಾನಾದ ಮಹಾಮಹಿಮರು ಗುರು ಅನ್ನದಾನ ಮಹಾಸ್ವಾಮಿಗಳವರು. ಅವರ 47ನೇ ಪುಣ್ಯ ಸ್ಮರಣೋತ್ಸವದಲ್ಲಿ ಪಾಲ್ಗೊಂಡ ನಿಮ್ಮೆಲ್ಲರಿಗೂ ಅವರ ಆಶೀರ್ವಾದ ಸದಾಕಾಲ ದೊರೆಯಲಿ ಎಂದು ನುಡಿದರು.