ಬೆಂಗಳೂರು: ಇರಾನ್–ಇಸ್ರೇಲ್–ಅಮೆರಿಕ ನಡುವಿನ ಯುದ್ಧದ ಪರಿಣಾಮ ಭಾರತದಲ್ಲಿಯೂ ಕಾಣಿಸಿಕೊಳ್ಳಲು ಆರಂಭವಾಗಿದೆ.
ಯುದ್ಧದ ಪರಿಣಾಮವಾಗಿ ಆಟೋ ಮತ್ತು ಕ್ಯಾಬ್ಗಳಲ್ಲಿ ಬಳಸುವ ಎಲ್ಪಿಜಿ ದರ ಏರಿಕೆಯಾಗಿದ್ದು, ಲೀಟರ್ಗೆ 10 ರಿಂದ 20 ರೂಪಾಯಿ ವರೆಗೆ ಹೆಚ್ಚಳವಾಗಿದೆ.
ಆರ್ಥಿಕ ತಜ್ಞರ ಪ್ರಕಾರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕು ಸಾಗಾಟಕ್ಕೆ ಅಡ್ಡಿಯಾಗಿರುವುದರಿಂದ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಡಗುಗಳು ಗುಡ್ ಹೋಪ್ ಶಿಖರದ ಮಾರ್ಗವಾಗಿ ಸಂಚರಿಸಬೇಕಾಗುತ್ತಿದ್ದು, ಸಾರಿಗೆ ವೆಚ್ಚವೂ ಹೆಚ್ಚಾಗಿದೆ ಎಂದು ಆರ್ಥಿಕ ತಜ್ಞ ಪ್ರೊ. ಎಸ್.ಆರ್. ಕೇಶವ ತಿಳಿಸಿದ್ದಾರೆ.
ಯುದ್ಧದ ಪರಿಣಾಮವಾಗಿ ಬೆಂಗಳೂರಿನ ಆಟೋ ಮತ್ತು ಕ್ಯಾಬ್ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಈ ಹಿಂದೆ ಆಟೋ ಎಲ್ಪಿಜಿ ದರ ಲೀಟರ್ಗೆ 58 ರೂ. ಇತ್ತು. ನಂತರ 59 ರೂ. ಆಗಿದ್ದರೆ, ಇದೀಗ ಕೆಲವು ಬಂಕ್ಗಳಲ್ಲಿ 69.74 ರೂ. ತಲುಪಿದೆ. ಕೆಲವು ಸ್ಥಳಗಳಲ್ಲಿ ಮಾಲೀಕರು 15 ರಿಂದ 20 ರೂ. ವರೆಗೆ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಇನ್ನೂ ಮುಂದಿನ ವಾರದಿಂದ ಆಟೋ ಮತ್ತು ಕ್ಯಾಬ್ಗಳಲ್ಲಿ ಬಳಸುವ ಎಲ್ಪಿಜಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಕೆಲವು ಚಾಲಕರು ಈಗಾಗಲೇ ಪ್ರತಿ ಕಿಲೋಮೀಟರ್ಗೆ 10 ರಿಂದ 20 ರೂ. ಹೆಚ್ಚುವರಿ ಕೇಳುತ್ತಿರುವುದಾಗಿ ಪ್ರಯಾಣಿಕರು ಹೇಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆಟೋ ಮತ್ತು ಕ್ಯಾಬ್ ಮೀಟರ್ ದರ ಹೆಚ್ಚಿಸಲು ಚಾಲಕರು ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ಮೀಟರ್ ದರ 36 ರೂ. ಇದ್ದು, ನಂತರ ಪ್ರತಿ ಕಿಲೋಮೀಟರ್ಗೆ 16 ರೂ. ಇದೆ. ಕ್ಯಾಬ್ಗಳಿಗೆ ಕನಿಷ್ಠ ದರದ ಮೇಲೆ ಪ್ರತಿ ಕಿಲೋಮೀಟರ್ಗೆ 24 ರೂ. ವಸೂಲಿ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಯುದ್ಧ ಮುಂದುವರಿದರೆ ಇಂಧನ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ.



