ಬೀದರ್: ಕುಟುಂಬದ ಸದಸ್ಯರೆಲ್ಲರೂ ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವು ಮಾಡಿ ಪರಾರಿಯಾದ ಘಟನೆ ಬೀದರ್ ತಾಲೂಕಿನ ಚಿದ್ರಿ ಗ್ರಾಮದಲ್ಲಿ ನಡೆದಿದೆ.
ಚಿದ್ರಿ ಗ್ರಾಮದ ರಾಜಕುಮಾರ ಬಿರಾದರ್ ಅವರ ನಿವಾಸದಲ್ಲಿ ಈ ಕಳ್ಳತನ ನಡೆದಿದ್ದು, ಮನೆಯವರು ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಸಮಯವನ್ನು ದುಷ್ಕರ್ಮಿಗಳು ಸದುಪಯೋಗಪಡಿಸಿಕೊಂಡಿದ್ದಾರೆ. ಮನೆ ಖಾಲಿ ಇರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ, ಮನೆಯಲ್ಲಿದ್ದ ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ.
ಕಳ್ಳರು ಸುಮಾರು 150 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 1.50 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ 20 ಲಕ್ಷ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಮನೆಯವರು ಮಧ್ಯಾಹ್ನ ಮದುವೆ ಸಮಾರಂಭಕ್ಕೆ ತೆರಳಿದ್ದು, ರಾತ್ರಿ ಮನೆಗೆ ಮರಳಿದಾಗ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಅನುಮಾನಗೊಂಡ ಅವರು ಮನೆಯೊಳಗೆ ಪರಿಶೀಲಿಸಿದಾಗ ಚಿನ್ನಾಭರಣ, ನಗದು ಕಳುವಾಗಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಗಾಂಧಿಗಂಜ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗ್ರಾಮದಲ್ಲಿ ನಡೆದ ಈ ಕಳ್ಳತನ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.



