ವಿಜಯಪುರ: ಮಹಾಶಿವರಾತ್ರಿ ಜಾಗರಣೆಯನ್ನು ಬಂಡವಾಳ ಮಾಡಿಕೊಂಡು ಕಳ್ಳರು ಮನೆ ಕಳ್ಳತನ ನಡೆಸಿದ ಘಟನೆ ವಿಜಯಪುರ ನಗರದ ಶಾರದಾ ನಗರದಲ್ಲಿ ನಡೆದಿದೆ.
ಸೋಮಶೇಖರ ಗಣಿ ಅವರಿಗೆ ಸೇರಿದ ಮನೆಯಲ್ಲಿ ಕಳ್ಳರು ನುಗ್ಗಿ 40 ಸಾವಿರ ರೂಪಾಯಿ ನಗದು, 154 ಗ್ರಾಂ ಚಿನ್ನಾಭರಣ ಮತ್ತು 270 ಗ್ರಾಂ ಬೆಳ್ಳಿ ಆಭರಣ ಕದ್ದೊಯ್ದಿದ್ದಾರೆ. ಕುಟುಂಬಸ್ಥರು ಮನೆಗೆ ಬೀಗ ಹಾಕಿ ಶಿವಗಿರಿಗೆ ಜಾಗರಣೆಗೆ ತೆರಳಿದ್ದರು.
ಇಂಡಿಯಾ – ಪಾಕ್ ಟಿ20 ಕ್ರಿಕೆಟ್ ಪಂದ್ಯ ಇದ್ದ ಕಾರಣ ಬೀದಿಯಲ್ಲಿ ಜನಸಂಚಾರವೂ ಇರಲಿಲ್ಲ. ಇದೇ ಅವಕಾಶ ಬಳಸಿಕೊಂಡ ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡದಿಂದ ಪರಿಶೋಧನೆ ನಡೆಸಲಾಗಿದ್ದು ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



