ನವದೆಹಲಿ: ಜಾಗತಿಕ ಆರ್ಥಿಕ ಅಸ್ಥಿರತೆ ಹಾಗೂ ಇಂಧನ ಬಿಕ್ಕಟ್ಟಿನ ನಡುವೆಯೇ ದೇಶದ ಆರ್ಥಿಕತೆಯನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಆರ್ಥಿಕ ಮಿತವ್ಯಯದ ಮನವಿಯ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಈ ಹಿಂದೆ ಶೇ 6 ರಷ್ಟಿದ್ದ ಒಟ್ಟಾರೆ ಆಮದು ಸುಂಕವನ್ನು ಈಗ ಶೇ 15 ಕ್ಕೆ ಏರಿಸಲಾಗಿದೆ. ಇದರಲ್ಲಿ ಶೇ 10 ರಷ್ಟು ಮೂಲ ಕಸ್ಟಮ್ಸ್ ಸುಂಕ ಹಾಗೂ ಶೇ 5 ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಸೇರಿದೆ. ಈ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಇರಾನ್ ಯುದ್ಧ ಹಾಗೂ ಜಾಗತಿಕ ತೈಲ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಆರ್ಥಿಕ ಒತ್ತಡವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ಮೋದಿ ಅವರು ನಾಗರಿಕರಿಗೆ ಕನಿಷ್ಠ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ಮುಂದೂಡಬೇಕು, ವಿದೇಶಿ ಪ್ರವಾಸ ಕಡಿಮೆ ಮಾಡಬೇಕು ಹಾಗೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಬೇಕು ಎಂದು ಮನವಿ ಮಾಡಿದ್ದರು. ಆಮದು ಅವಲಂಬನೆ ಕಡಿಮೆ ಮಾಡಿ ದೇಶದ ಆರ್ಥಿಕತೆಯನ್ನು ಬಲಪಡಿಸುವುದೇ ಈ ಕರೆಯ ಉದ್ದೇಶ ಎಂದು ಹೇಳಲಾಗಿದೆ.
ಭಾರತವು ವಿಶ್ವದಲ್ಲೇ ಚಿನ್ನದ ಎರಡನೇ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದ್ದು, ಸುಂಕ ಏರಿಕೆಯಿಂದ ಚಿನ್ನದ ಬೇಡಿಕೆಯಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಆದರೆ ಮತ್ತೊಂದೆಡೆ ಅಧಿಕ ತೆರಿಗೆಯಿಂದ ಚಿನ್ನದ ಕಳ್ಳಸಾಗಣೆ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.
ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಭಾರತದ ಚಿನ್ನದ ಆಮದು ಕಳೆದ 30 ವರ್ಷಗಳಲ್ಲೇ ಕನಿಷ್ಠ ಮಟ್ಟ ತಲುಪಿತ್ತು. ಇದೀಗ ಸುಂಕ ಏರಿಕೆಯಿಂದ ಆಮದು ಪ್ರಮಾಣ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.



