ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ಸಮೀಪ ಪಾಕಿಸ್ತಾನ ಸೇನೆಗೆ ಸೇರಿದ ಸೇನಾ ಹೆಲಿಕಾಪ್ಟರ್ ಪತನಗೊಂಡು ೨೧ ಮಂದಿ ಸೈನಿಕರು ಮೃತಪಟ್ಟಿರುವುದಾಗಿ ಪಾಕಿಸ್ತಾನ ಸೇನೆ ತಿಳಿಸಿದೆ.
ಸೇನೆಯ ಪ್ರಕಟಣೆಯ ಪ್ರಕಾರ, ಮುಜಾಫರಾಬಾದ್‌ನ ಹೆಲಿಪ್ಯಾಡ್‌ನಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ತಾಂತ್ರಿಕ ದೋಷಕ್ಕೆ ಒಳಗಾಗಿ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ಅಪಘಾತದ ವೇಳೆ ಭಾರೀ ಸದ್ದು ಕೇಳಿಬಂದಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಹಾಗೂ ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ. ಗಾಯಾಳುಗಳು ಮತ್ತು ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲ ೨೧ ಮಂದಿ ಸೈನಿಕರು ಮೃತಪಟ್ಟಿರುವುದಾಗಿ ಸೇನೆ ದೃಢಪಡಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ದುರಂತಕ್ಕೆ ಪಾಕಿಸ್ತಾನದ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ಶೆಹಬಾಜ್ ಶರೀಫ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಸೈನಿಕರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಅವರು, ದೇಶ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಕೂಡ ಘಟನೆಯಿಂದ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತ ಯೋಧರ ಕುಟುಂಬಗಳೊಂದಿಗೆ ತಮ್ಮ ಸಂತಾಪವನ್ನು ಹಂಚಿಕೊಂಡಿದ್ದಾರೆ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.



