ಟೋಲ್ ಸರ್ವೀಸ್ ರೋಡ್ ನಲ್ಲಿ ಕುತ್ತಿಗೆಗೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ ತಂದೆ….
ವಿಜಯಸಾಕ್ಷಿ ಸುದ್ದಿ, ದಾವಣಗೆರೆ
ಮಕ್ಕಳು ಹೆಚ್ಚು ಹಠ ಮಾಡುತ್ತವೆ ಎಂಬ ಕಾರಣದಿಂದ ತಂದೆಯೊಬ್ಬ ತನ್ನ ಅವಳಿ ಮಕ್ಕಳನ್ನು ಕುತ್ತಿಗೆಗೆÀ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ರಾಣೆಬೆನ್ನೂರಿನ ಚಳಗೇರಿ ಟೋಲ್ ಸರ್ವೀಸ್ ರೋಡ್ ಬಳಿ ಗುರುವಾರ ನಡೆದಿದೆ.
ದಾವಣಗೆರೆ ಆಂಜನೇಯ ಬಡಾವಣೆಯ ನಿವಾಸಿ ಅಮರ್ ಕಿತ್ತೂರು (36) ಅವಳಿ ಮಕ್ಕಳನ್ನು ಕೊಂದ ತಂದೆ. ನಾಲ್ಕೂವರೆ ವರ್ಷದ ಅದೈತ್ ಮತ್ತು ಅನ್ವಿತ್ ಎಂಬ ಮಕ್ಕಳೇ ತಂದೆಯಿಂದ ಕೊಲೆಯಾದವರು.
ಘಟನೆಯ ಹಿನ್ನೆಲೆ………
ಬೆಳಗಾವಿ ಮೂಲದ ಅಮರ್ ದಾವಣಗೆರೆಯಲ್ಲಿ ವಾಸವಾಗಿದ್ದು, ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಪತ್ನಿ ಜಯಲಕ್ಷ್ಮಿ ಕೆಲ ತಿಂಗಳ ಹಿಂದೆ ಗಂಡನ ಜೊತೆ ಜಗಳ ಮಾಡಿ ತವರೂರಾದ ವಿಜಯಪುರಕ್ಕೆ ಹೋಗಿದ್ದಳು. ಮಕ್ಕಳು ಹಠ ಮಾಡುವುದರಿಂದ ಅವರನ್ನು ಕೊಲ್ಲುತ್ತೇನೆ ಎಂದು ಅಮರ್ ಆಗಾಗ ಪತ್ನಿಗೆ ಹೆದರಿಸುತ್ತಿದ್ದ ಎನ್ನಲಾಗಿದೆ.
ಹೆಂಡತಿ ತವರಿಗೆ ಹೋದ ಸಂದರ್ಭದಲ್ಲಿ ಅಮರ್ ಈ ಕೃತ್ಯಗೈದಿದ್ದಾನೆಂದು ತಿಳಿದು ಬಂದಿದೆ. ಮಕ್ಕಳನ್ನು ಕೊಲೆ ಮಾಡಿದ ನಂತರ ತಾನೇ ಪತ್ನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದ. ಅವನ ಪತ್ನಿಯ ಮೂಲಕ ವಿಷಯ ತಿಳಿದ ಪೊಲೀಸರು ಮೊಬೈಲ್ ಲೊಕೇಷನ್ ಜಾಡನ್ನು ಆಧರಿಸಿ ಆರೋಪಿ ಅಮರ್‌ನನ್ನು ಬಂಧಿಸಿದ್ದಾರೆ. ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



