ಗದಗ ಜಿಲ್ಲೆಯ ಪೊಲೀಸರ ಕರ್ತವ್ಯಕ್ಕೆ ಹ್ಯಾಟ್ಸ್ ಆಫ್…… ರಾಜ್ಯದಲ್ಲಿಯೇ ಗದಗ ಜಿಲ್ಲೆ ಮೊಬೈಲ್ ಪತ್ತೆ ಪ್ರಕರಣಗಳಲ್ಲಿ ಟಾಪ್ 5….

0
Spread the love

ಕಳೆದುಹೋಗಿದ್ದ ಮೊಬೈಲ್ ಪತ್ತೆಹಚ್ಚಿ ಮಾಲೀಕರಿಗೆ ನೀಡಿದ ಗದಗ ಪೊಲೀಸರು….

1124 ಪ್ರಕರಣಗಳು ದಾಖಲು….. ಈ ಮೊದಲು 315, ಈಗ 80 ಮೊಬೈಲ್ ಮಾಲೀಕರಿಗೆ ವಾಪಸ್……

ವಿಜಯಸಾಕ್ಷಿ ಸುದ್ದಿ, ಗದಗ

ಕೇಂದ್ರ ಸರ್ಕಾರ ಇತ್ತೀಚೆಗೆ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಸಿಇಐಆರ್ ಎಂಬ ಪೋರ್ಟಲ್‌ನ್ನು ಫೆಬ್ರುವರಿ 2023ರಲ್ಲಿ ಜಾರಿಗೆ ತಂದಿದ್ದು, ಇದನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಕಳೆದು ಹೋದ 80 ಮೊಬೈಲ್‌ಗಳನ್ನು ವಾರಸುದಾರಿಗೆ ವಾಪಸ್ ಕೊಡಲಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಹೇಳಿದರು.

ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 1124 ಮೊಬೈಲ್ ಕಳವಿನ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಈ ಮೊದಲು 315 ಮೊಬೈಲ್‌ಗಳನ್ನು ಸಿಇಐಆರ್ ತಂತ್ರಾಂಶದ ಹಾಗೂ ಮೊಬಿಫೈ ಎಂಬ ತಂತ್ರಾಂಶದ ಮೂಲಕ ಹುಡುಕಿ ವಾಪಸ್ ಕೊಡಲಾಗಿತ್ತು. ಇಂದು ಮತ್ತೆ 80 ಮೊಬೈಲ್‌ಗಳನ್ನು ಹುಡುಕಿ ಅದರ ಮಾಲೀಕರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಯಾರು ಮೊಬೈಲ್ ಕಳೆದುಕೊಂಡಿರುತ್ತಾರೋ ಆ ವಿಷಯ ನಮಗೆ ಗೊತ್ತಾದರೆ ಸಾಕು, ನಾವೇ ಸ್ವತಃ ಅವರನ್ನು ಕರೆದು ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿಕೊಳ್ಳುತ್ತೇವೆ. ಈ ತಂತ್ರಾಂಶದ ಮೂಲಕ ಕಳೆದು ಹೋದ ಮೊಬೈಲುಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ ಎಂದು ಹೇಳಿದರು.

ಇದಕ್ಕಾಗಿಯೇ ನಾವು ಪತ್ಯೇಕ ವಿಭಾಗವನ್ನು ತೆರೆದು ಆ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿ ಮೊಬಿಫೈ ಮೂಲಕ ಮಾಹಿತಿ ಪಡೆದುಕೊಂಡು ಸಿಇಐಆರ್‌ಗೆ ನಾವೇ ಅಪ್‌ಲೋಡ್ ಮಾಡುತ್ತಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿಯೇ ಗದಗ ಜಿಲ್ಲೆ ಮೊಬೈಲ್ ಪತ್ತೆ ಪ್ರಕರಣಗಳಲ್ಲಿ ಟಾಪ್ 5 ರಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದರು.

ನಗರ ಠಾಣೆ, ಗ್ರಾಮೀಣ ಠಾಣೆ, ಬೆಟಗೇರಿ, ಮುಳಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ, ನರಗುಂದ, ರೋಣ, ಗಜೇಂದ್ರಗಡ, ಮುಂಡರಗಿ, ನರೇಗಲ್, ಸೆಂಟ್ರಲ್ ಪಿಎಸ್, ಟೆಕ್ ಸೆಲ್ ಈ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋದ ಸುಮಾರು 11,25,557 ರೂ. ಮೌಲ್ಯದ ಒಟ್ಟು 80 ಮೊಬೈಲ್‌ಗಳನ್ನು ಮಾಲೀಕರಿಗೆ ನೀಡಲಾಗಿದೆ. ಮೊಬೈಲ್ ಪತ್ತೆ ಮಾಡುವಲ್ಲಿ ಶ್ರಮವಹಿಸಿದ ಪೊಲೀಸ್ ಸಿಬ್ಬಂದಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು ಎಸ್ಸಿ ಬಿ.ಎಸ್ ನೇಮಗೌಡ ಹೇಳಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಇದ್ದರು. ಪೊಲೀಸರ ಈ ಕರ್ತವ್ಯ ನಿಷ್ಠೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


Spread the love

LEAVE A REPLY

Please enter your comment!
Please enter your name here