ದುಡ್ಡು ಕೊಟ್ಟರೂ ಸಿಗದ ರಸಗೊಬ್ಬರ : ತಪ್ಪದ ಗೋಳು

0
Shortage of DAP fertilizer in Taluk during sowing season
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕೃಷಿ ಇಲಾಖೆ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಸೇರಿ ಮುಂಗಾರಿನಲ್ಲಿ ರೈತರಿಗೆ ಬಿತ್ತನೆಗೆ ಬೀಜ, ಗೊಬ್ಬರದ ಕೊರತೆಯಿಲ್ಲ ಎಂಬ ಹೇಳಿಕೆಯ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ ರೈತರಿಗೆ ಮುಖ್ಯವಾಗಿ ಬೇಕಾದ ಡಿಎಪಿ, ಕಾಂಪ್ಲೆಕ್ಸ್ ರಸಗೊಬ್ಬರದ ಕೊರತೆ ಕಾಡುತ್ತಿದೆ.

Shortage of DAP fertilizer in Taluk during sowing season

ಕಳೆದ ವರ್ಷದ ಬರಗಾಲದಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದರೂ ಮುಂಗಾರು ಪೂರ್ವ ಮಳೆಯಿಂದ ಹೊಸ ಭರವಸೆ, ಕನಸುಗಳೊಂದಿಗೆ ಸಾಲ-ಸೋಲ ಮಾಡಿ ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ ರೈತರಿಗೆ ಬಿತ್ತನೆ ಬೀಜದ ದರ ಹೆಚ್ಚಳದೊಂದಿಗೆ ದುಡ್ಡು ಕೊಟ್ಟರೂ ಅವಶ್ಯಕ ರಸಗೊಬ್ಬರ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಡಿಎಪಿ ಮತ್ತು ಅವಶ್ಯಕ ಕಾಂಪ್ಲೆಕ್ಸ್ ಗೊಬ್ಬರ ಸಿಗದೇ ಮುಂಗಾರಿನ ಬಿತ್ತನೆಗೆ ಪೆಟ್ಟು ಬಿದ್ದಂತಾಗಿದೆ.

ಮುಂಗಾರು ಪೂರ್ವ ಮಳೆಯಿಂದಾಗಿ ಬಹುತೇಕ ರೈತರು ಉತ್ಸಾಹದಿಂದ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ 10-15 ದಿನಗಳಿಂದ ಲಕ್ಷ್ಮೇಶ್ವರ ತಾಲೂಕಿನಲ್ಲಿ ರೈತರು ಡಿಎಪಿ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದರೂ ಡಿಎಪಿ ಗೊಬ್ಬರ ಸಿಗದಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಮುಂಗಾರಿನ ಪ್ರತಿಯೊಂದು ಬೆಳೆಗಳ ಬಿತ್ತನೆ ವೇಳೆ ಡಿಎಪಿ ರಸಗೊಬ್ಬರ ಬಳಸುವುದು ಸಾಮಾನ್ಯ. 18% ಯೂರಿಯಾ, 46% ಪಾಸ್ಪರಸ್ ಪೋಷಕಾಂಶವಿರುವ ಡಿಎಪಿ ಎಲ್ಲ ಬೆಳೆಗೆ ಉತ್ತಮ ಎಂಬ ನಂಬಿಕೆ ರೈತರದ್ದು.
ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕುಗಳ ರಸಗೊಬ್ಬರ ಅಂಗಡಿಗಳಲ್ಲಿ ಡಿಎಪಿ ಗೊಬ್ಬರದ ಜತೆಗೆ ಪ್ರಮುಖ ಕಾಂಪ್ಲೆಕ್ಸ್ ಗೊಬ್ಬರದ ದಾಸ್ತಾನು ಇಲ್ಲವಾಗಿದೆ. ರ50-100 ಚೀಲಗಳು ಬೆಳಗಾಗುವಷ್ಟರಲ್ಲಿ ಮಾರಾಟವಾಗಿರುತ್ತದೆ. ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಿಂದ ನಿತ್ಯ ಡಿಎಪಿ ಗೊಬ್ಬರ ಕೇಳಿಕೊಂಡು ಬರುವ ರೈತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಹೋಗುತ್ತಿದ್ದಾರೆ.

Shortage of DAP fertilizer in Taluk during sowing season

ಬರಗಾಲದಿಂದ ರೈತರ ಕೈಯಲ್ಲಿ ದುಡ್ಡಿಲ್ಲದಿದ್ದರೂ ಈ ವರ್ಷವದರೂ ಉತ್ತಮ ಮಳೆಯಾಗಿ ನಮ್ಮ ಸಂಕಷ್ಟ ದೂರವಾಗುತ್ತದೆ ಎಂಬ ಬಲವಾದ ನಂಬಿಕೆಯೊಂದಿಗೆ ಮತ್ತೆ ಬಡ್ಡಿಸಾಲ ಮಾಡಿ ಬೀಜ-ಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾದ್ದಾರೆ. ಆದರೆ ಗುಣಮಟ್ಟದ ಬಿತ್ತನೆ ಬೀಜಗಳು ಸಿಗುತ್ತಿಲ್ಲ. ಸಿಕ್ಕರೂ ದರ ದುಪ್ಪಟ್ಟು ಮಾಡಿದ್ದಾರೆ. ಆದಾಗ್ಯೂ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಲು ಸಿದ್ಧರಿರುವ ರೈತರಿಗೆ ಈಗ ಅವಶ್ಯಕ ಡಿಎಪಿ ಮತ್ತು ಇತರೇ ಕಾಂಪ್ಲೆಕ್ಸ್ ಗೊಬ್ಬರ ಸಿಗುತ್ತಿಲ್ಲ. ಈಗ ಡಿಎಪಿಗಾಗಿ ಕಾದು ಬಿತ್ತನೆಗೂ ತಡವಾಗಿದೆ. ಇನ್ನೊಂದು ವಾರ ಮಾತ್ರ ಬಿತ್ತನೆಗೆ ಸಕಾಲವಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಡಿಎಪಿ ಗೊಬ್ಬರದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
– ಶಿವಾನಂದ ಕಟಗಿ, ಬಾಪೂಗೌಡ ಪಾಟೀಲ.
ರೈತರು.

ಕಳೆದ ವರ್ಷದ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಕಲ ಜೀವರಾಶಿಗಳಿಗೆ ಅನ್ನ ನೀಡುವ ರೈತರಿಗೆ ದುಡ್ಡು ಕೊಟ್ಟರೂ ಸಕಾಲಕ್ಕೆ ಗುಣಮಟ್ಟದ ಬೀಜ, ಅವಶ್ಯಕ ಗೊಬ್ಬರ ಸಿಗದಿರುವುದು ಮತ್ತು ಸಿಕ್ಕರೂ ಬೆಲೆ ದುಪ್ಪಟ್ಟಾಗಿರುವುದು ದುರ್ದೈವ. ಸರ್ಕಾರಿ ಶಾಲೆಗಳು ಸೋರುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳ ರಸ್ತೆಗಳ ಸ್ಥಿತಿ ಅಯೋಮಯವಾಗಿದ್ದು, ಅನುದಾನ ಸಿಗುತ್ತಿಲ್ಲ. ರೈತರು ಉಚಿತವಾಗಿ ಗೊಬ್ಬರ ಕೇಳುತ್ತಿಲ್ಲ. ಸರ್ಕಾರ ರೈತರಿಗೆ ಡಿಎಪಿ ಗೊಬ್ಬರ, ರಿಯಾಯಿತಿ ದರದಲ್ಲಿ ಬೀಜ ಲಭಿಸುವಂತೆ ಮಾಡಬೇಕು. ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾವಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೈತರೊಡಗೂಡಿ ಸರ್ಕಾರದ ವಿರುದ್ಧ ಬೀದಿಗಿಳಿಯಬೇಕಾಗುತ್ತದೆ.
– ಡಾ.ಚಂದ್ರು ಲಮಾಣಿ.
ಶಾಸಕರು.

ಡಿಎಪಿ ರಸಗೊಬ್ಬರದ ಕೊರತೆಯಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ರೈತರ ಬೇಡಿಕೆಯಂತೆ ಡಿಎಪಿ ಗೊಬ್ಬರ ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇತರೇ ಕಾಂಪ್ಲೆಕ್ಸ್ ರಸಗೊಬ್ಬರ, ಬೀಜ ದಾಸ್ತಾನಿದ್ದು ರೈತರು ಡಿಎಪಿ ಗೊಬ್ಬರಕ್ಕಾಗಿ ಬಿತ್ತನೆ ತಡ ಮಾಡದೇ ಭೂಮಿಯಲ್ಲಿ ತೇವಾಂಶವಿದ್ದರೆ ಸಕಾಲಿಕ ಬಿತ್ತನೆ ಮಾಡಬೇಕು. ನಂತರದಲ್ಲಿ ದ್ರವರೂಪದ ಡಿಎಪಿ, ಯೂರಿಯಾ ಬಳಕೆ ಮಾಡಬಹುದಾಗಿದೆ.
– ರೇವಣಪ್ಪ ಮನಗೂಳಿ.
ಸಹಾಯಕ ಕೃಷಿ ನಿರ್ದೇಶಕರು.


Spread the love

LEAVE A REPLY

Please enter your comment!
Please enter your name here