ಆಡಿದ ಮಾತು ಉಳಿಸಿಕೊಳ್ಳುವುದೇ ಧರ್ಮ : ರಂಭಾಪುರಿ ಶ್ರೀಗಳು

0
Shravan Ishtalinga Mahapuja and Nula Full Moon Purana Pravachana Dharma Ceremony
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಮಾತೆಂಬುದು ಸಾಮಾನ್ಯವಾದುದಲ್ಲ. ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನ. ಆಡುವ ಮಾತು, ನಡೆಯುವ ದಾರಿ ಇನ್ನೊಂದು ಆಗಬಾರದು. ಆಡಿದ ಮಾತಿನಂತೆ ನಡೆದುಕೊಳ್ಳುವುದೇ ನಿಜವಾದ ಧರ್ಮ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಇಷ್ಟಲಿಂಗ ಮಹಾಪೂಜಾ ಹಾಗೂ ನೂಲ ಹುಣ್ಣಿಮೆಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನದಿಯ ನೀರನ್ನು ಎಷ್ಟು ತುಂಬಿದರೂ ಅದು ಹೇಗೆ ಖಾಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಅದು ಖಾಲಿಯಾಗುವುದಿಲ್ಲ. ಅಧರ್ಮದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯಲಾರವು. ಜನರು ಯತಾರ್ಥ ಅರಿತು ಸಾತ್ವಿಕ, ಸಮೃದ್ಧ ನಾಡನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನಃ ಜನರನ್ನು ನಾಸ್ತಿಕರನ್ನಾಗಿ ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು. ಮಾನವನಿಗೆ ಉತ್ತಮ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ನೀಡಿದ ವಿಶ್ವ ಬಂಧುತ್ವದ ಶಾಂತಿ ಸಾಮರಸ್ಯದ ಸಂದೇಶ ಸಕಲ ಜೀವಾತ್ಮರ ಶ್ರೇಯೋಭಿವೃದ್ಧಿಗೆ ಸ್ಫೂರ್ತಿಯಾಗಿದೆ ಎಂದರು.
ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಉಟಗಿ ಹಿರೇಮಠದ ಶಿವಪ್ರಸಾದ್ ದೇವರು ‘ಶ್ರೀ ಜಗದ್ಗುರು ರೇಣುಕ ವಿಜಯ’ ಪುರಾಣದಲ್ಲಿ ಬರುವ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿಯನ್ನು ವಿವರಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಶ್ರೀ ಪೀಠದ ಲೆಕ್ಕಾಧಿಕಾರಿ ಸಂಕಪ್ಪನವರ, ಮಠದ ಚಂದ್ರಶೇಖರ ಹಾಗೂ ಗುರುಕುಲದ ಎಲ್ಲ ಶಿವಯೋಗ ಸಾಧಕರು ಉಪಸ್ಥಿತರಿದ್ದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬ್ಯಾಡಗಿ ನಗರದ ರವೀಂದ್ರ ಶ್ರೀಮತಿ ಸುನಂದಾ ಮತು ಮಂಜುನಾಥ ಶಾಸ್ತಿçಗಳು ಇಂದಿನ ಅನ್ನ ದಾಸೋಹ ಸೇವೆ ಸಲ್ಲಿಸಿದರು. ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು 33ನೇ ವರ್ಷದ ಶ್ರಾವಣ ಇಷ್ಟಲಿಂಗ ಪೂಜಾ ತಪೋನುಷ್ಠಾನಗೈದು ಬಂದ ಭಕ್ತರಿಗೆ ಶುಭ ಹಾರೈಸಿದರು.
ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ಮನುಷ್ಯನಿಗೆ ಆಹಾರ, ನೀರು ದೈಹಿಕ ವಿಕಾಸಕ್ಕೆ ಕಾರಣವಾದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿ ಪಥದತ್ತ ಕರೆದೊಯ್ಯುತ್ತದೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here