ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬದುಕು ಕೊಟ್ಟ ಭಗವಂತನ ಶಕ್ತಿ ಅದ್ಭುತ. ಆಧ್ಯಾತ್ಮಿಕ ಬದುಕಿಗೆ ಧರ್ಮ ಆಶಾಕಿರಣ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಸ್ಕಾರ ಬದುಕನ್ನು ಉಜ್ವಲಗೊಳಿಸುತ್ತದೆ. ಸ್ವಾರ್ಥವನ್ನು ಗೆದ್ದವನು, ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ನಿಜವಾದ ಸುಖಿ. ಹಸಿದು ಉಣ್ಣುವುದು ಪ್ರಕೃತಿ ಧರ್ಮ. ಹಂಚಿ ಉಣ್ಣುವುದು ಸಂಸ್ಕೃತಿಯ ಗುಣ. ಮನಸ್ಸಿಟ್ಟು ಮಾಡಿದ ಕೆಲಸ, ಕಷ್ಟಪಟ್ಟು ದುಡಿದ ಹಣ, ಹಲವರೊಂದಿಗೆ ಹಂಚಿ ತಿನ್ನುವ ಗುಣ, ಭಕ್ತಿಯಿಂದ ಮಾಡುವ ದೇವರ ಪೂಜೆ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲವೆಂಬ ನಂಬಿಕೆ ಕಳೆದುಕೊಳ್ಳಬಾರದು. ಕತ್ತಲಲ್ಲಿ ನಡೆಯುವಾಗ ಬೆಳಕಿನ, ಬಿಸಿಲಿನಲ್ಲಿ ನಡೆಯುವಾಗ ನೆರಳಿನ ಅವಶ್ಯಕತೆಯಿದೆ.
ಜೀವನದ ದಾರಿಯಲ್ಲಿ ಸಾಗುವಾಗ ಒಳ್ಳೆಯ ಸ್ನೇಹಿತರ ಮತ್ತು ಮಾರ್ಗದರ್ಶಕರ ಅವಶ್ಯಕತೆಯಿದೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿ ಇರಬೇಕೆಂದು ಮಹಾತ್ಮರು ನುಡಿದಿದ್ದಾರೆ. ನೊಂದವರ, ಬೆಂದವರ ಧ್ವನಿಯಾಗಿ ಸತ್ಕಾರ್ಯಗಳನ್ನು ಮಾಡಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗಿದೆ. ಮೌಲ್ಯಾಧಾರಿತ ಬದುಕನ್ನು ಅಳವಡಿಸಿಕೊಂಡು ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದರು.
ನೇತೃತ್ವ ವಹಿಸಿದ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಲಾಭ ಸಿಗದೇ ಇರಬಹುದು. ಆದರೆ ಅಂತಹ ಗುಣಕ್ಕೆ ಹೃದಯಗಳನ್ನು ಗೆಲ್ಲುವ ಶಕ್ತಿಯಿದೆ ಎಂದರು.
ಈ ಧರ್ಮ ಸಮಾರಂಭದಲ್ಲಿ ಮಳಖೇಡ ಕಾರ್ತಿಕೇಶ್ವರ ಮಠದ ಅಭಿನವ ಕಾರ್ತಿಕೇಶ್ವರ ಶ್ರೀಗಳು, ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶ್ರೀಗಳು, ರಾಮಗೇರಿ ಮಠದ ಉಮೇಶ್ವರ ಶ್ರೀಗಳು, ಮಾವನೂರು ಬೃಹನ್ಮಠದ ವಿರೂಪಾಕ್ಷ ಶ್ರೀಗಳು, ರಟ್ಟೀಹಳ್ಳಿ ವಿಶ್ವೇಶ್ವರ ದೇವರು ಪಾಲ್ಗೊಂಡಿದ್ದರು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಜಡೆಯ ಸಾಲಿಗೆ ರಾಜಣ್ಣ, ಕೊಟ್ಟೂರಿನ ವಿಶ್ವನಾಥ, ಹಳ್ಯಾಳದ ಗುರುನಾಥಗೌಡ ಮಾದಾಪುರ, ಶಿವನಗೌಡ ಹೊಸಮನಿ, ಗಂಗಾಧರಸ್ವಾಮಿ ಹಿರೇಮಠ ಮೊದಲಾದ ಗಣ್ಯರು ಧರ್ಮ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಗಂಗಾಧರ ಹಿರೇಮಠ ಭಕ್ತಿ ಗೀತೆ ಹಾಡಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಕ್ಷೇತ್ರದ ಎಲ್ಲ ದೈವಕ್ಕೆ ವಿಶೇಷ ಪೂಜೆ ಜರುಗಿತು.
ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ದೇವರು ಮಾತನಾಡಿ, ಹೊಗಳಿಕೆ ಮತ್ತು ತೆಗಳಿಕೆ ಸಹಜವಾಗಿದ್ದು, ಎಲ್ಲರ ಜೀವನದಲ್ಲಿ ನಡೆಯುವ ಘಟನೆಗಳನ್ನು ಸ್ವೀಕರಿಸಿ. ಹೂವು ಅರಳಿ ಮಿನುಗಲು ಸೂರ್ಯನ ಬೆಳಕು ಮತ್ತು ಮಳೆ ಎರಡೂ ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಚಿತ್ತದ ಬದುಕನ್ನು ಕಟ್ಟಿಕೊಳ್ಳಲು ಕೊಟ್ಟ ಸಂದೇಶಗಳನ್ನು ಯಾರೂ ಮರೆಯಬಾರದೆಂದರು.
Advertisement