ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಮಾನವನ ಬದುಕು ಮೌಲ್ಯವುಳ್ಳದ್ದು. ಮನುಷ್ಯನಲ್ಲಿ ಆಸೆ-ಆಕಾಂಕ್ಷೆಗಳು ಇರುವುದು ಸಹಜ. ಆದರೆ ಆಸೆಗಳಿಗಾಗಿ ಬದುಕದೇ ಆದರ್ಶಗಳಿಗಾಗಿ ಬದುಕಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ಸಂತೋಷದಿಂದ ಬದುಕಲು ಪ್ರಯತ್ನಿಸಬೇಕು. ನೀತಿ-ನಿಯಮ ಇಲ್ಲದೇ ಸಮಾಜ ಬೆಳೆಯಲಾರದು. ಸಂಜೆಯಾದಂತೆ ಸೂರ್ಯ ಮಾತ್ರ ಮುಳುಗುವುದಿಲ್ಲ. ನಮ್ಮ ವಯಸ್ಸಿನ ಒಂದು ದಿನ ಕಡಿಮೆಯಾಗುತ್ತದೆ. ಒಳ್ಳೆಯ ಸಂಸ್ಕಾರ ಪಡೆದರೆ ಜೀವನದಲ್ಲಿ ಸಫಲರಾಗುತ್ತೇವೆ. ಮನಃಶಾಂತಿಯಿಲ್ಲದ ಸಂಪತ್ತು, ಆರೋಗ್ಯ ಇಲ್ಲದ ಆಯುಷ್ಯ, ಅರ್ಥ ಮಾಡಿಕೊಳ್ಳದ ಸಂಬಂಧ, ಅಕ್ಕರೆಯಿಲ್ಲದ ವ್ಯವಹಾರಿಕ ಸ್ನೇಹದಿಂದ ಯಾವ ಪ್ರಯೋಜನವೂ ಇಲ್ಲ. ದೀರ್ಘವಾದ ಜೀವನ ಮುಖ್ಯವಲ್ಲ. ದಿವ್ಯವಾದ ಜೀವನವೇ ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದರು.
ನೇತೃತ್ವ ವಹಿಸಿದ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರುವಿಲ್ಲದೇ ಅರಿವು ಮೂಡದು. ಸನ್ನಡತೆ, ವಿನಯ-ವಿಧೇಯತೆಗಳು ಬೆಳೆಯಲು ಸಾಧ್ಯವಿಲ್ಲ. ಶಿವಪಥವನರಿಯಲು ಗುರುವಿನ ಮಾರ್ಗದರ್ಶನ ಅವಶ್ಯಕವೆಂದರು.
ಇದೇ ಸಂದರ್ಭದಲ್ಲಿ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಪಾದಿಸಿದ `ವರ್ಷದ ವಾರ್ತಾ ಸಂಕಲನ’ವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಈ ಸಮಾರಂಭದಲ್ಲಿ ನಾಲವಾರ ಆದಿಶೇಷ ಹಿರೇಮಠದ ಚಂದ್ರಶೇಖರ ಸ್ವಾಮಿಗಳು, ಸಿಂದಗಿಯ ವೀರರಾಜೇಂದ್ರ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಹೊನ್ನಾಳಿಯ ಡಾ. ಎಂ. ಶಿವಶಂಕರಯ್ಯ, ಹಾವೇರಿಯ ಎಸ್.ಎನ್. ಹಿರೇಮಠ ಹಾಗೂ ಯಡ್ರಾಮಿ ಚಂದ್ರಶೇಖರ ಪುರಾಣಿಕಮಠ, ಗುರುಕುಲದ ಸಿದ್ಧಲಿಂಗಯ್ಯ ಹಿರೇಮಠ, ಜಮಖಂಡಿಯ ರೇವಣಯ್ಯಸ್ವಾಮಿ, ಕುರುಗೋಡಿನ ಯರಿಸ್ವಾಮಿ, ರೇವತಗಾಂವ ವಿಶ್ವನಾಥಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಬೆಳಿಗ್ಗೆ ಶ್ರಾವಣ ಮಾಸದ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಕ್ಷೇತ್ರದ ಎಲ್ಲ ದೈವಗಳಿಗೆ ಶ್ರಾವಣ ಸೋಮವಾರದ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ಜರುಗಿತು.
ಸಹಸ್ರಾರು ಭಕ್ತರು ಪಾಲ್ಗೊಂಡು ಗುರು ಕಾರುಣ್ಯ ಪಡೆದರು. ಸಮಾರಂಭದ ನಂತರ ಕಬನೂರು ಭಕ್ತ ಮಂಡಳಿಯಿಂದ ಅನ್ನ ದಾಸೋಹ ಜರುಗಿತು.
‘ಶ್ರೀ ಜಗದ್ಗುರು ರೇಣುಕ ವಿಜಯ’ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ದೇವರು ಮಾತನಾಡಿ, ಬಿತ್ತಿದ ಬೀಜದಂತೆ ಫಸಲು ಹೇಗೋ ಹಾಗೆಯೇ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿಯಾಗುತ್ತದೆ. ಉಜ್ವಲ ಭವಿಷ್ಯಕ್ಕೆ ಭಗವಂತನ ಕೊಡುಗೆ ಅಪಾರ. ಬೀಗುವುದು ಸದ್ಗುಣವಲ್ಲ, ಬಾಗುವುದು ಸದ್ಗುಣ. ಶ್ರೀ ಜಗದ್ಗುರು ರೇಣುಕಾಚಾರ್ಯರ ಲೋಕೋದ್ಧಾರದ ಚಿಂತನೆಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಅನ್ವಯಿಸುತ್ತವೆ ಎಂದರು.
Advertisement