ಪುಲಿಗೆರೆಯ ಶ್ರೀ ಸೋಮೇಶ್ವರ ಮಹಾರಥೋತ್ಸವ

0
Shri Someshwar Maharathotsava
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಆರಾಧ್ಯದೈವ ಪುಲಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ನಿಮಿತ್ತ ಶನಿವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಶ್ರೀ ಸೋಮೇಶ್ವರ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

Advertisement

ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.

ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ಧರಿಸಿ ದೇವಸ್ಥಾನಕ್ಕೆ ಆಗಮಿಸಿ, ಶ್ರೀ ಸೋಮೇಶ್ವರನಿಗೆ ಶೃದ್ಧಾ ಭಕ್ತಿಯಿಂದ ನಮಿಸಿದರು. ಹಣ್ಣು-ಕಾಯಿ ನೈವೇದ್ಯ ಮಾಡಿಸಿಕೊಂಡು ಬಳಿಕ ರಥಕ್ಕೆ ಉಡಿ ತುಂಬಿ, ಹೊಸ ವಸ್ತಾçಭರಣಗಳನ್ನಿರಿಸಿ ಪೂಜಿಸಿ ಕೃತಾರ್ಥರಾದರು.

ಶನಿವಾರ ಸಂಜೆ ಅಪಾರ ಭಕ್ತ ಸಮೂಹದೊಂದಿಗೆ ಜರುಗಿದ ಶ್ರೀ ಸೋಮೇಶ್ವರನ ಮಹಾರಥೋತ್ಸವಕ್ಕೆ ನಾಡಿನಾದ್ಯಂತ ಆಗಮಿಸಿದ್ದ ಭಕ್ತಗಣ ಸಾಕ್ಷಿಯಾಗಿತ್ತು. ಪಟ್ಟಣ ಸೇರಿ ತಾಲೂಕಿನಾದ್ಯಂತ ಸೇರಿದ್ದ ಅಪಾರ ಭಕ್ತ ಸಮೂಹ ಪಾಲ್ಗೊಂಡು ಭಕ್ತಿ-ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದರು. ಯುವಕರು ತೇರಿನ ಕಳಸಕ್ಕೆ ಗುರಿಯಿಟ್ಟು ಹಣ್ಣು, ಉತ್ತತ್ತಿ ಎಸೆಯುತ್ತಿದ್ದ ದೃಶ್ಯ ಕಂಡು ಬಂದಿತು. ನವ ದಂಪತಿಗಳು ತೇರಿನ ಕಳಸ ನೋಡಲು ಜಮಾಯಿಸಿದ್ದರು. ಮಹಾರಥೋತ್ಸವದ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಕಮಿಟಿ, ಸೇವಾ ಸಮಿತಿಯ ಸರ್ವ ಸದಸ್ಯರು, ಮುಖ್ಯ ಅರ್ಚಕರು, ಹಿರಿಯರು ನೇತೃತ್ವ ವಹಿಸಿ ನಿರ್ವಹಿಸಿದರು.

ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಲಕ್ಷ್ಮಿದೇವಿ ಪೂಜೆ, ರಥಪೂಜೆ ಮತ್ತು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಮೇ.19ರಂದು ಸಂಜೆ 5.30ಕ್ಕೆ ಕಡುಬಿನ ಕಾಳಗ. ಮೇ.20ರಂದು ಓಕಳಿ ಕಾರ್ಯಕ್ರದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.


Spread the love

LEAVE A REPLY

Please enter your comment!
Please enter your name here