ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬ್ರಹ್ಮ ವಿಷ್ಣು ಮೊದಲ್ಗೊಂಡು ಸಕಲ ದೇವಾನುದೇವತೆಗಳಲ್ಲಿ ಶಿವನೇ ಸರ್ವ ಶ್ರೇಷ್ಠ. ಶಿವ ಸಂಸ್ಕೃತಿಗೆ ಅಪಮಾನವಾದ ಸಂದರ್ಭದಲ್ಲಿ ಶ್ರೀ ವೀರಭದ್ರಸ್ವಾಮಿ ಅವತರಿಸಿ ದಕ್ಷ ಬ್ರಹ್ಮನ ಸಂಹಾರ ಮಾಡಿದನು. ಶಿವ ಸಂಸ್ಕೃತಿಯನ್ನು ಎತ್ತಿ ಹಿಡಿದ ಕೀರ್ತಿ ಶ್ರೀ ವೀರಭದ್ರಸ್ವಾಮಿಗೆ ಸಲ್ಲುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಅಂಗವಾಗಿ ಜರುಗಿದ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ದುಷ್ಟ ಶಕ್ತಿಗಳು ಬಹು ಬೇಗನೇ ಬೆಳೆಯುತ್ತವೆ. ಅಷ್ಟೇ ಬೇಗನೇ ನಾಶ ಹೊಂದುತ್ತವೆ. ದುಷ್ಟ ಶಕ್ತಿಗಳ ಜೊತೆಗೆ ಹೋರಾಟ ಮಾಡಿ ಜಯ ತಂದಿತ್ತ ಇತಿಹಾಸವಿದೆ. ದಕ್ಷಬ್ರಹ್ಮನ ಅಹಂಕಾರ ಮಿತಿ ಮೀರಿದಾಗ, ಶಿವನಿಗೆ ಅಪಮಾನ ಮಾಡಿದಾಗ ದಾಕ್ಷಾಯಣಿ ಯಜ್ಞ ಕುಂಡಕ್ಕೆ ಹಾರಿದ ಸಂದರ್ಭದಲ್ಲಿ ಶಿವನ ಜಟಾಮುಕುಟದಿಂದ ಅವತರಿಸಿ ದಕ್ಷನನ್ನು ಸಂಹರಿಸಿ ಶಿವನ ಮಹಿಮೆಯನ್ನು ಬೆಳೆಸಿದ ಕೀರ್ತಿ ಶ್ರೀ ವೀರಭದ್ರಸ್ವಾಮಿಗೆ ಸಲ್ಲುತ್ತದೆ.
ದುಷ್ಟ ದುರಹಂಕಾರಿಗಳ ದರ್ಪವನ್ನು ನಾಶ ಮಾಡಿ ಶಿಷ್ಟರ ಸಂರಕ್ಷಣೆಗಾಗಿ ಅವತರಿಸಿ ಬಂದಾತನೇ ವೀರಭದ್ರಸ್ವಾಮಿ. ಪ್ರತಿ ವರುಷ ಭಾದ್ರಪದ ಮೊದಲ ಮಂಗಳವಾರ ನಾಡಿನೆಲ್ಲೆಡೆ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂದಿನ ಕಲಿಕಾಲದಲ್ಲಿ ಮತ್ತೊಮ್ಮೆ ಶ್ರೀ ವೀರಭದ್ರಸ್ವಾಮಿ ಅವತರಿಸಿ ಉತ್ಕೃಷ್ಟ ಸಂಸ್ಕೃತಿ ಬೆಳೆಸುವಂತಾಗಲೆಂದು ಆಶಿಸಿದರು.
ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶ್ರೀಗಳು, ಸಿಂಧನೂರು ಕನ್ನೂರಿನ ಸೋಮನಾಥ ಶ್ರೀಗಳು, ಗುರುಕುಲದ ಸಿದ್ಧಲಿಂಗಯ್ಯ ಹಿರೇಮಠ, ಗುರುಕುಲದ ಶಿವಯೋಗ ಸಾಧಕರು ಪೂಜೆಯಲ್ಲಿ ಪಾಲ್ಗೊಂಡರು.
ಶ್ರೀ ವೀರಭದ್ರೇಶ್ವರ ಮಂಗಲ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.