ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರೀ ವೀರಭದ್ರೇಶ್ವರ ದೇವರ ದೇವಸ್ಥಾನಗಳು ಹೊರರಾಜ್ಯ ಸೇರಿ ರಾಜ್ಯಾದ್ಯಂತ ಇದ್ದು, ದೇವರನ್ನು ಸರ್ವ ಜಾತಿ, ಜನಾಂದವರು ಆರಾಧಿಸುತ್ತಾರೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹಿರೇಮಠ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಶ್ರೀ ವೀರಭದ್ರೇಶ್ವರ ಪುರಾಣ 7ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ಕರ್ನಾಟಕದಲ್ಲಿ ಸರ್ವರೂ ಆರಾಧಿಸುವ ವೀರಭದ್ರ ದೇವರಿಂದಲೇ ಕನ್ನಡಿಗ ಎಂಬ ನಾಮ ಬಂದಿದೆ. ಯಡೂರು, ಗೊಡಚಿ, ರಾಚೋಟಿ, ಕಾರಡಗಿ, ಸಿಂಗಟಾಲೂರು, ತಲಕಾಡು, ಹುಮನಾಬಾದ ವೀರಭದ್ರನ ಪ್ರಮುಖ ಕ್ಷೇತ್ರಗಳಾಗಿದ್ದು, ಅಲ್ಲಿಗೆ ಹೋಗಿ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಿವರಿಸಿದರು.
ರೋಣ ಮಂಡಳ ಬಿಜೆಪಿ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಜಕ್ಕಲಿ ಮಾತನಾಡಿ, ನರೇಗಲ್ಲ ಸೇರಿದಂತೆ ನಮ್ಮ ಸುತ್ತಮುತ್ತಲಿನ ಹಳ್ಳಿಗೆ ಹಿರೇಮಠದ ಪೂಜ್ಯರಂಥ ಅತ್ಯುತ್ತಮ ಗುರುಗಳು ದೊರೆತಿದ್ದು, ಅವರ ಮಾರ್ಗದರ್ಶನದಲ್ಲಿ ಜನರು ಮುನ್ನಡೆದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಬಿಜೆಪಿ ಮುಖಂಡರಾದ ಶಶಿಧರ ಸಂಕನಗೌಡ್ರ ಹಾಗೂ ನ್ಯಾಯವಾದಿ ಉಮೇಶ ಸಂಗನಾಳಮಠ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಬಸವರಾಜ ವಂಕಲಕುಟಿ, ಗಣ್ಯರಾದ ನಿಂಗಪ್ಪ ಕಣವಿ, ಕಲ್ಮೇಶ ತೊಂಡಿಹಾಳ ಉಪಸ್ಥಿತರಿದ್ದರು. ರುದ್ರಯ್ಯ ಸೊಬರದಮಠ ನಿರೂಪಿಸಿದರು. ಹಿರೇಮಠ ಶಾಲೆಯ ವಿದ್ಯಾರ್ಥಿಗಳು ವೀರಭದ್ರೇಶ್ವರನ ವಡಪು ಹೇಳಿದರು. ಕೋಡಿಕೊಪ್ಪದ ಸದ್ಭಕ್ತರು ಗುರುಗಳನ್ನು ಸನ್ಮಾನಿಸಿದರು.



