ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ನೀಡಲು ಸಿದ್ದರಾಮಯ್ಯ ಸೂಚನೆ!

0
Spread the love

ಬೆಳಗಾವಿ:– ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ನೀಡಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Advertisement

ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೂನ್‌ನಿಂದ ಇದುವರೆಗೆ 565 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.62ರಷ್ಟು ಹೆಚ್ಚು ಮಳೆಯಾಗಿದೆ. ಅತಿವೃಷ್ಟಿಯಿಂದ 6 ಮಂದಿ ಸಾವಿಗೀಡಾಗಿದ್ದು, ಎಲ್ಲಾ ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ. 12 ಜಾನುವಾರುಗಳು ಸಾವನ್ನಪ್ಪಿದ್ದು, ಪರಿಹಾರ ಒದಗಿಸಲಾಗಿದೆ. ಸಾವಿಗೀಡಾದ ಒಂದು ಜಾನುವಾರಿಗೆ 37,500 ರೂಪಾಯಿ ಪರಿಹಾರ ನೀಡಲಾಗುತ್ತಿದೆ.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 48 ಮನೆಗಳು ಪೂರ್ಣ ಹಾನಿಗೀಡಾಗಿದ್ದು, 950 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಈ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಹಾನಿಗೆ ನೀಡಲಾದ ಪರಿಹಾರ ದುರುಪಯೋಗವಾದ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ದುರುಪಯೋಗ ತಪ್ಪಿಸಲು ಪೂರ್ಣ ಮನೆ ಹಾನಿಗೀಡಾದವರಿಗೆ ರೂ. 1.20 ಲಕ್ಷ ನಗದು ಪರಿಹಾರ ನೀಡಲಾಗುತ್ತಿದ್ದು, ಇದರೊಂದಿಗೆ ಮನೆಯನ್ನು ಸಹ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಭಾಗಶ: ಹಾನಿಗೀಡಾದ ಮನೆಗಳಿಗೆ 6500 ರೂ. ಪರಿಹಾರವನ್ನು ನೀಡಬೇಕಾಗಿದೆ. ಆದರೆ ರಾಜ್ಯ ಸರ್ಕಾರ 50 ಸಾವಿರ ರೂ. ಪರಿಹಾರ ನೀಡುತ್ತಿದೆ. ಮಳೆಯಿಂದ ಹಾನಿಗೀಡಾದವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 43,500 ರೂ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ನೀಡುತ್ತಿದೆ. ಈ ಹಿಂದೆ ಪರಿಹಾರದ ವಿಷಯದಲ್ಲಿ ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತು. ಈಗ ಏಕರೂಪದಲ್ಲಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 17 ಜನರಿಗೆ ಪರಿಹಾರ ಒದಗಿಸಲಾಗಿದ್ದು, ಮನೆ ಹಾನಿಗೀಡಾದ ಎಲ್ಲರಿಗೂ ಆದಷ್ಟು ಬೇಗನೆ ಪರಿಹಾರ ಒದಗಿಸಲಿದ್ದೇವೆ ಎಂದರು.


Spread the love

LEAVE A REPLY

Please enter your comment!
Please enter your name here