‘ಸಿದ್ಧಾಂತ ಶಿಖಾಮಣಿ’ ಅಮೂಲ್ಯ ರತ್ನ : ರಂಭಾಪುರಿ ಶ್ರೀಗಳು

0
Siddhanta Shikhamani Recitation Program
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಜ್ಞಾನ ವಿಕಾಸಕ್ಕೆ ಸಾಧನೆ ಮತ್ತು ಪ್ರಯತ್ನ ಅಗತ್ಯ. ಜೀವ ಶಿವನಾಗಲು, ಅಂಗ ಲಿಂಗವಾಗಲು ದೇಹ ದೇವಾಲಯವಾಗುವ ಜ್ಞಾನವನ್ನು ಸಿದ್ಧಾಂತ ಶಿಖಾಮಣಿ ಗ್ರಂಥದಿಂದ ತಿಳಿಯಲು ಸಾಧ್ಯ. ಆಧ್ಯಾತ್ಮ ಸಾಧಕರಿಗೆ ಸಿದ್ಧಾಂತ ಶಿಖಾಮಣಿ ಅಮೂಲ್ಯ ಕೊಡುಗೆ ಕೊಟ್ಟಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ರಂಭಾಪುರಿ ಪೀಠದ ಪೂಜಾ ಸಭಾಂಗಣದಲ್ಲಿ ಜರುಗಿದ ಸಿದ್ಧಾಂತ ಶಿಖಾಮಣಿ ಪಾರಾಯಣ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಆಶೀರ್ವಚನ ನೀಡುತ್ತಿದ್ದರು.
ಸಿದ್ಧಾಂತ ಶಿಖಾಮಣಿ ಕೃತಿಯಲ್ಲಿ ಅಮೂಲ್ಯವಾದ ವಿಚಾರ ಧಾರೆಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ್ದಾರೆ. ಜಾತಿ, ಮತ, ಪಂಥ ಭೇದವಿಲ್ಲದೇ ಎಲ್ಲರೂ ತಮ್ಮ ಸಾಧನೆಯ ಮೂಲಕ ಸಾಕ್ಷಾತ್ಕಾರ ಪಡೆಯಲು ಸಾಧ್ಯವೆಂದು ನಿರೂಪಿಸಿದ್ದಾರೆ.
ಸಂಸ್ಕಾರಯುಕ್ತ ಬದುಕಿಗೆ ಶಿವಾದ್ವೈತ ಸಿದ್ಧಾಂತದ ಅರಿವು ಆಚರಣೆ ಅಗತ್ಯ. ಇದೊಂದು ಗೋಪ್ಯ ಚಿಂತಾಮಣಿ ಇದ್ದಂತೆ. ಅವರವರ ಬುದ್ಧಿವಂತಿಕೆಗೆ ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಗಸ್ಥಲ ಮತ್ತು ಲಿಂಗಸ್ಥಲವೆಂದು ಎರಡು ಭಾಗವಿದ್ದು, ಒಟ್ಟು ನೂರೊಂದು ಸ್ಥಲದ ಹಿರಿಮೆಯನ್ನು ಒಳಗೊಂಡಿದೆ ಎಂದರು.
ಈ ಪವಿತ್ರ ಸಮಾರಂಭದಲ್ಲಿ ಮಹಾರಾಷ್ಟ್ರದ ಗಿರಿಗಾಂವ, ಉಜ್ಜನ, ಶಿರಹಾಳು, ಅನಂತ ಪಾಳ ಶ್ರೀಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 50ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿದ ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳಿಗೆ ಸ್ಮರಣಿಕೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಮಹಿಳಾ ಮಂಡಲದ ಮುಖ್ಯಸ್ಥರಾದ ಕವಿತಾ ಹಿರೇಮಠ ಧಾರವಾಡ, ಬಳ್ಳಾರಿಯ ಅನುರಾಧ, ಬಂಕಾಪುರದ ಜ್ಯೋತಿ ಅರಳೆಲೆಮಠ, ಸುಮಂಗಲಾ ಶೆಟ್ಟರ್, ಶಿವಮೊಗ್ಗದ ರೇಖಾ ಸುಭಾಷ ಮತ್ತು ಶಾಂತಾ ನಾಯಕ ನೇತೃತ್ವ ವಹಿಸಿ ಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಸಿಕೊಟ್ಟರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಧಾರವಾಡದ ಕವಿತಾ ಹಿರೇಮಠ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು.
ಇಂಥ ಅಮೂಲ್ಯ ಧರ್ಮ ಗ್ರಂಥದ ಪಾರಾಯಣ ಸುಮಾರು 250ಕ್ಕೂ ಹೆಚ್ಚು ಜನ ಮಹಿಳೆಯರು ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ ಪಾರಾಯಣದಲ್ಲಿ ಪಾಲ್ಗೊಂಡಿದ್ದು ಜಗದ್ಗುರುಗಳಿಗೆ ಸಂತೋಷ ತಂದಿದೆ ಎಂದ ಅವರು ನಾಳೆಯ ಹುಣ್ಣಿಮೆಯ ಸಂದರ್ಭದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಎಲ್ಲರಿಗೂ ತೀರ್ಥ ಪ್ರಸಾದ ಕರುಣಿಸಲಾಗುವುದೆಂದು ಶ್ರೀಗಳು ಹೇಳಿದರು. 

Spread the love
Advertisement

LEAVE A REPLY

Please enter your comment!
Please enter your name here