ಮೈಸೂರು: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದರೂ, ಈ ಭೇಟಿ ಸಂಪೂರ್ಣವಾಗಿ ತುರ್ತು ಸಂಚಾರದಂತೆಯೇ ಮುಗಿದುಹೋಯಿತು. ಕೇವಲ 15 ನಿಮಿಷಗಳ ಕಾಲ ಮಾತ್ರ ಏರ್‌ಪೋರ್ಟ್‌ನಲ್ಲಿ ಉಳಿದ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಲು ಸಿಕ್ಕ ಸಮಯ ಕೇವಲ ಎರಡು ನಿಮಿಷ ಮಾತ್ರ.
ಇಂದು ಮಧ್ಯಾಹ್ನ 2:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ರಾಹುಲ್ ಗಾಂಧಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿದರು. 2:35ಕ್ಕೆ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲುರಿಗೆ ಹೊರಟರು. ಸಂಜೆ 5:45ಕ್ಕೆ ಮತ್ತೆ ಮೈಸೂರಿಗೆ ವಾಪಸ್ ಆಗಿ, ಸಂಜೆ 6 ಗಂಟೆಗೆ ದೆಹಲಿಗೆ ವಿಶೇಷ ವಿಮಾನದಲ್ಲಿ ಮರಳಲಿದ್ದಾರೆ.
ಸಿಎಂ ಮತ್ತು ಡಿಸಿಎಂ ರಾಹುಲ್ ಗಾಂಧಿಯನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಆದರೆ ಅಧಿಕಾರ ಹಂಚಿಕೆ ಗೊಂದಲ ಆರಂಭವಾದ ಬಳಿಕ ಮೊದಲ ಬಾರಿಗೆ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಭೇಟಿಯಾದರೂ, ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಉಭಯ ಕುಶಲೋಪರಿಗಷ್ಟೇ ಮಾತುಕತೆ ಸೀಮಿತವಾಯಿತು.
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಮೈಸೂರಿನಲ್ಲಿ ಡಿಕೆಶಿ ಸಂಪೂರ್ಣವಾಗಿ ಏಕಾಂಗಿಯಾಗಿ ಸಂಚರಿಸಿದರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಸಿದ ಬಳಿಕ ಸಿಎಂ ಮತ್ತು ಡಿಸಿಎಂ ಒಟ್ಟಿಗೆ ಹೊರಟಿಲ್ಲ. ಸಿಎಂ ಜೊತೆ ಸೇರದೆ, ಡಿಕೆಶಿ ದೂರ ನಡೆದು ಪ್ರತ್ಯೇಕವಾಗಿ ಕಾರ್ ಹತ್ತಿ ಹೊರಟ ದೃಶ್ಯಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಈ ನಡುವೆ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮೈಸೂರು ಅರಮನೆ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಸಚಿವ ಕೆ.ಜೆ. ಜಾರ್ಜ್ ಆನೆ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.



