ಹಾಸನ: ನಟ ಯಶ್ ಅವರ ತಾಯಿ ಪುಷ್ಪ ಅವರಿಗೆ ಸಂಬಂಧಿಸಿದ ಸೈಟ್ ವಿವಾದ ಪ್ರಕರಣದಲ್ಲಿ ಹಾಸನದ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಪುಷ್ಪ ಹಾಗೂ ನಟರಾಜ್ ಅವರು ದೇವರಾಜ್ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.
ಪುಷ್ಪ ಅವರು ವಿದ್ಯಾನಗರದಲ್ಲಿರುವ ಸರ್ವೆ ನಂಬರ್ 90ರ 125×45 ಅಡಿ ಅಳತೆಯ ಸೈಟನ್ನು ಗಿರೀಶ್ ಎಂಬುವರಿಂದ ಖರೀದಿಸಿದ್ದಾಗಿ ಹೇಳಿಕೊಂಡಿದ್ದು, ಸೈಟ್‌ಗೆ ಕಾಂಪೌಂಡ್ ಹಾಕಿದ್ದರು. ಆದರೆ ದೇವರಾಜ್ ಅವರು ಜೆಸಿಬಿ ಬಳಸಿ ಕಾಂಪೌಂಡ್ ತೆರವುಗೊಳಿಸಿದ್ದರಿಂದ ವಿವಾದ ಉಂಟಾಗಿತ್ತು.
ಈ ಪ್ರಕರಣದಲ್ಲಿ ಪುಷ್ಪ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಈ ಹಿಂದೆ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಹಾಗೂ ದೇವರಾಜ್‌ಗೆ ನೋಟಿಸ್ ನೀಡುವ ಮುನ್ನ ಪ್ರತಿಬಂಧಕಾಜ್ಞೆ ನೀಡಬೇಕು ಎಂದು ಕೋರಿದ್ದರು. ಆದರೆ ನ್ಯಾಯಾಲಯ ಈ ಅರ್ಜಿಗಳನ್ನು ತಿರಸ್ಕರಿಸಿದೆ.
ಇತ್ತ ದೇವರಾಜ್ ಅವರು, ಮೈಸೂರಿನ ಲಕ್ಷ್ಮಮ್ಮರಿಂದ ಸೈಟನ್ನು ಜಿಪಿಎ ಮೂಲಕ ಪಡೆದಿರುವುದಾಗಿ ಹೇಳಿದ್ದು, ನ್ಯಾಯಾಲಯದ ಆದೇಶದ ಆಧಾರದಲ್ಲಿಯೇ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯ ದೇವರಾಜ್‌ಗೆ ನೋಟಿಸ್ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಜನವರಿ 31ಕ್ಕೆ ನಿಗದಿ ಮಾಡಿದೆ.



