ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ಸರ್ವ ಇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಮಹತ್ವದ ಅಂಗವಾಗಿದ್ದು, ಕಣ್ಣಿನ ಸಂರಕ್ಷಣೆ, ಕಾಳಜಿ ವಹಿಸಬೇಕೆಂದು ಗದಗ ತೋಂಟದಾರ್ಯ ಮಠದ ಜ. ಡಾ. ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಗದುಗಿನ ಶ್ರೀಮತಿ ಉಷಾದೇವಿ ಜಿ.ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಚಿಟರ್‌ನಲ್ಲಿ ರೋಟರಿ ಕ್ಲಬ್ ಗದಗ ಬೆಟಗೇರಿ ವೆಲ್ಫೇರ್ ಸೊಸೈಟಿ ಹಾಗೂ ಗದಗ-ಬೆಟಗೇರಿ ರೋಟರಿ ಕ್ಲಬ್ ನೀಲಮ್ಮ ಪ್ರಭಣ್ಣ ಹುಣಶಿಕಟ್ಟಿ ಅವರ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ 200ನೇ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರೋಟರಿ ಕ್ಲಬ್ ಸಮಾಜಮುಖಿಯಾಗಿ, ಜನಮುಖಿಯಾಗಿ ಸೇವೆ ಮಾಡುವುದರಲ್ಲಿ ತನ್ನ ಹಿರಿಮೆಯನ್ನು ಮೆರೆದಿದೆ. ಜನತೆಯ ಆರೋಗ್ಯ ಸುಧಾರಣೆ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ರೋಟರಿ ಪದಾಧಿಕಾರಿಗಳು ತಮ್ಮನ್ನು ಸೇವಾ ಕಾರ್ಯಕ್ಕೆ ಸಮರ್ಪಿಸಿಕೊಂಡಿರುವದು ಶ್ಲಾಘನೀಯ ಎಂದು ಬಣ್ಣಿಸಿದರು.
ಈ ಮೊದಲು ಗೋದಾನ, ಭೂದಾನ, ಅನ್ನದಾನ, ರಕ್ತದಾನ, ನೇತ್ರದಾನ ಇತ್ತಿಚೆಗೆ ದೇಹದಾನ ಹೀಗೆ ದಾನಗಳ ವಿಸ್ತಾರವು ಹೆಚ್ಚುತ್ತಿದ್ದು, ದಾನಗುಣಕ್ಕೆ ಹೊಸ ಪರಿಕಲ್ಪನೆಯ ಮೂಲಕ ಸಮಾಜಕ್ಕೆ ಒಳಿತಾಗುತ್ತ ಬಂದಿದೆ. ಆಧುನಿಕತೆಯ ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳು, ಅತ್ಯಾಧುನಿಕ ಯಂತ್ರೋಪಕರಣಗಳು ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಗಣನೀಯ ಪಾತ್ರ ವಹಿಸಿವೆ ಎಂದರು.
ರೋಟರಿಯ ಸಮಾಜಮುಖಿ, ಜನಮುಖಿ ಕಾರ್ಯಕ್ಕೆ ಜನಸಮುದಾಯವೂ ಕೈ ಜೋಡಿಸುತ್ತಿದೆ. ದಾನವು ಸದ್ವಿನಿಯೋಗ ಆಗುತ್ತಿರುವ ಹಿನ್ನೆಲೆಯಲ್ಲಿ ದಾನಿಗಳೂ ಸಹ ಮುಂದೆ ಬಂದು ದಾನ ನೀಡುವ ಮೂಲಕ ಸಂತೃಪ್ತ ಭಾವನೆ ಹೊಂದುತ್ತಿದ್ದಾರೆ ಎಂದರು.
ಉಚಿತ ನೇತ್ರ ಶಸûçಚಿಕಿತ್ಸಾ ಶಿಬಿರಗಳು ಯಶಸ್ವಿಯಾಗಿ ನಡೆದು ಬರಲು ಕಾರಣರಾದ ದಾನಿಗಳು, ವೈದ್ಯರು ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು. ವೇದಿಕೆಯ ಮೇಲೆ ಶಿಬಿರದ ಪ್ರಾಯೋಜಕರಾದ ನೀಲಮ್ಮ ಪ್ರಭಣ್ಣ ಹುಣಶಿಕಟ್ಟಿ ದಂಪತಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕುಂದ್ರಾಳಹಿರೇಮಠ ಪ್ರಾರ್ಥಿಸಿದರು, ರೋಟರಿ ಕ್ಲಬ್ ಅಧ್ಯಕ್ಷ ಡಾ. ಆರ್.ಬಿ. ಉಪ್ಪಿನ ಸ್ವಾಗತಿಸಿದರು. ಡಾ. ಉಮೇಶ ಪುರದ ಹಾಗೂ ವಿಶ್ವನಾಥ ಯಳಮಲಿ ಪರಿಚಯಿಸಿದರು. ಶ್ರೀಧರ ಸುಲ್ತಾನಪೂರ ನಿರಂತರ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳು ನಡೆದು ಬಂದ ದಾರಿ ಹಾಗೂ ರೋಟರಿ ಕ್ಲಬ್‌ನ ಅಸ್ತಿತ್ವದ ಕುರಿತು ಮಾತನಾಡಿದರು. ಬಾಲಕೃಷ್ಣ ಕಾಮತ್ ನಿರೂಪಿಸಿದರು, ಶಿವಾಚಾರ್ಯ ಹೊಸಳ್ಳಿಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ವಿಜಯಕುಮಾರ ಸಜ್ಜನರ, ಡಾ. ಬಸರಿಗಿಡದ, ಡಾ. ವ್ಹಿ.ಬಿ. ಹಿರೇಮಠ, ಡಾ. ಮೇರವಾಡೆ, ಡಾ. ರಾಕೇಶ, ಡಾ. ಜಿ.ಬಿ. ಪಾಟೀಲ, ಡಾ. ಜ್ಯೋತಿ ಪಾಟೀಲ, ಕಾರ್ಯದರ್ಶಿ ಸಂತೋಷ ಅಕ್ಕಿ, ಡಾ. ಪ್ರದೀಪ ಉಗಲಾಟದ, ಶ್ರೀಧರ ಧರ್ಮಾಯತ, ಸಂಜಯ ಬಾಗಮಾರ, ಅರವಿಂದಸಿಂಗ್ ಬ್ಯಾಳಿ, ಚನ್ನವೀರಪ್ಪ ಹುಣಶಿಕಟ್ಟಿ, ನರೇಶ್ ಜೈನ್, ಎಚ್.ಎಸ್. ಪಾಟೀಲ, ಚೇಂಬರ್ ಅಧ್ಯಕ್ಷ ತಾತನಗೌಡ ಪಾಟೀಲ, ನಾಗರತ್ನಾ ಮಾರನಬಸರಿ, ಪ್ರೀತಿ ಶಿವಪ್ಪಯ್ಯನಮಠ, ರಾಣಿ ಚಂದಾವರಿ ಸೇರಿದಂತೆ ರೋಟರಿ, ಇನ್ನರ್‌ವ್ಹೀಲ್ ಕ್ಲಬ್‌ನ ಸದಸ್ಯರು, ನೇತ್ರಚಿಕಿತ್ಸಾ ಫಲಾನುಭವಿಗಳು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶೇಖರ ಸಜ್ಜನರ ಮಾತನಾಡಿ, ಜನಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್ಫೇರ್ ಸೊಸೈಟಿ ಹಾಗೂ ಗದಗ-ಬೆಟಗೇರಿ ರೋಟರಿ ಕ್ಲಬ್ ತನ್ನ ಹಲವಾರು ಸಮಾಜಮುಖಿ ಕಾರ್ಯಗಳಿಂದಾಗಿ ಜನಮನ್ನಣೆ ಪಡೆದುಕೊಂಡಿದೆ. ಈ ಎಲ್ಲ ಕಾರ್ಯಗಳಿಗೆ ಪ್ರಾಯೋಜಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ ಎಂದರಲ್ಲದೆ, ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಗಳು ನಿರಂತರವಾಗಿ ಮುಂದುವರೆಯಲಿವೆ ಎಂದರು.