ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರ ಬಗ್ಗೆ ಆಡಿರುವ ಮಾತುಗಳು ವಿವಾದ ಸೃಷ್ಟಿಸಿದೆ. ಈಗಾಗಲೇ ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ದೂರು ದಾಖಲಿಸಿದ್ದು ಸಾಕಷ್ಟು ವಿವಾದದ ಬಳಿಕ ಸೋನು ನಿಗಮ್ ಕ್ಷಮೆ ಯಾಚಿಸಿದ್ದಾರೆ. ಬೆಂಗಳೂರು ಪೊಲೀಸರು ಸಹ ಸೋನು ನಿಗಂ ಅವರಿಗೆ ನೊಟೀಸ್ ನೀಡಿ ಉತ್ತರಿಸುವಂತೆ ತಾಕೀತು ಮಾಡಿದ್ದಾರೆ. ಈ ಮಧ್ಯೆ ಕನ್ನಡ ಸಿನಿಮಾವೊಂದರಿಂದ ಸೋನು ನಿಗಂ ಅವರು ಹಾಡಿದ್ದ ಹಾಡನ್ನು ತೆಗೆದು ಹಾಕಲಾಗಿದೆ.
‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾಕ್ಕಾಗಿ ಸೋನು ನಿಗಂ ಅವರಿಂದ ಹಾಡೊಂದನ್ನು ಹಾಡಿಸಲಾಗಿತ್ತು. ಆದರೆ ವಿವಾದದ ಬಳಿಕ ಆ ಹಾಡನ್ನು ಚಿತ್ರತಂಡ ಕೈಬಿಟ್ಟಿದೆ. ‘ಮನಸ್ಸು ಹಾಡ್ತದೆ..ವಯಸ್ಸು ಕಾಡ್ತದೆ’ ಎಂಬ ಹಾಡೊಂದನ್ನು ಸೋನು ನಿಗಂ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾಕ್ಕಾಗಿ ಹಾಡಿದ್ದರು. ಆ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಸಹ ಆಗಿತ್ತು. ಅದರೆ ವಿವಾದದ ಬಳಿಕ ಆ ಹಾಡನ್ನು ಯೂಟ್ಯೂಬ್ನಲ್ಲಿ ಪ್ರೈವೇಟ್ ಮಾಡಲಾಗಿದ್ದು ಅದೇ ಹಾಡನ್ನು ಚಿತ್ರತಂಡ ಮತ್ತೊಬ್ಬ ಗಾಯಕರಿಂದ ಮತ್ತೆ ಹಾಡಿಸಿದೆ.ಅದೇ ಹಾಡನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
‘ಪ್ರಚಾರದ ಮನಸ್ಥಿತಿ ನಮ್ಮದಲ್ಲ. ಕನ್ನಡ ಪರವಾಗಿ ಇರಬೇಕೆಂಬುದಷ್ಟೆ ನಮ್ಮ ಯೋಚನೆ. ಸೋನು ನಿಗಂ ಮನಸ್ಸಿನಲ್ಲಿ ವಿಕೃತ ರೂಪ ಕಾಣಿಸಿತು, ಅವರ ಹಾಡನ್ನ ಬಳಸಿಕೊಳ್ಳಬೇಕಾ ಅನ್ನೋ ಯೋಚನೆ ಶುರುವಾಯ್ತು, ಆ ಸಾಂಗ್ ಕೇಳೋವಾಗ ಕಿವಿಗೆ ಹತ್ತಿ ಇಟ್ಕೊಳ್ಳಿ ಅಂತ ಹೇಳೋ ಪರಿಸ್ತಿತಿಲಿದ್ದೀವಿ. ಸೋನು ನಿಗಮ್ ಹಾಡನ್ನ ಧಿಕ್ಕರಿಸ್ತಿದ್ದಿವಿ. ಚೇತನ್ ಸೋಸ್ಕಾ ಅವರಿಂದ ಅದೇ ಹಾಡನ್ನು ಈಗಾಗಲೇ ಹಾಡಿಸಿ ಆಗಿದೆ. ಅದೇ ಹಾಡನ್ನು ಬಿಡುಗಡೆ ಮಾಡುತ್ತೀವಿ’ ಎಂದಿದ್ದಾರೆ ನಿರ್ಮಾಪಕ ಸಂತೋಷ್.
‘ನಮ್ಮ ಸಿನಿಮಾದ ಸಂಗೀತ ನಿರ್ದೇಶಕ ಮನೋಮೂರ್ತಿ ಅವರೊಟ್ಟಿಗೆ ಈ ಬಗ್ಗೆ ಮಾತನಾಡಿದೆ, ಹಾಡು ಬರೆದ ಯೋಗರಾಜ್ ಭಟ್ ಅವರೊಟ್ಟಿಗೂ ಈ ವಿಷಯವನ್ನು ನಮ್ಮ ನಿರ್ಣಯಕ್ಕೆ ಬಿಟ್ಟರು, ಹಾಗಾಗಿ ಸೋನು ನಿಗಂ ಹಾಡನ್ನು ತೆಗೆದು ಹಾಕಿದ್ದೀವಿ. ಸೋನು ನಿಗಂ ಕ್ಷಮೆ ಕೇಳಿದ್ದಾರೆ, ಆದರೆ ಅವರು ಕ್ಷಮೆ ಕೇಳಿರುವ ರೀತಿ ಸರಿಯಿಲ್ಲ. ಕನ್ನಡಿಗರಿಗೆ ಅವಮಾನ ಮಾಡಿದ ಸೋನು ನಿಗಂ ಧ್ವನಿ ನಮಗೆ ಬೇಕಿಲ್ಲ’ ಎಂದು ಅವರು ಹೇಳಿದ್ದಾರೆ.



