ರಾಯ್‌ಪುರದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನದಲ್ಲಿ ಭಾರತ ತಂಡ ಸೋಲನ್ನಪ್ಪಿದೆ. ಕೊಹ್ಲಿ, ಗಾಯಕ್ವಾಡ್ ಶತಕಗಳ ನೆರವಿನಿಂದ 358 ರನ್ ಗಳಿಸಿದ್ದರೂ, ಅನನುಭವಿ ಬೌಲಿಂಗ್ ಹಾಗೂ ಇಬ್ಬನಿ ಪರಿಣಾಮ ರನ್ ಡಿಫೆಂಡ್ ಮಾಡಲು ವಿಫಲವಾಯಿತು. ದಕ್ಷಿಣ ಆಫ್ರಿಕಾ ಕೊನೆಯ ಓವರ್‌ನಲ್ಲಿ ಗುರಿ ಬೆನ್ನಟ್ಟಿ ಜಯ ಸಾಧಿಸಿತು, ಸರಣಿ ಸಮಬಲಗೊಳಿಸಿತು. ಇನ್ನೂ ಭಾರತ ಸೋಲಲು ಮುಖ್ಯ ಕಾರಣ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್ ಬಿಚ್ಚಿಟ್ಟಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೆ ಎಲ್ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಎರಡನೇ ಇನ್ನಿಂಗ್ಸ್ ವೇಳೆ ಸಾಕಷ್ಟು ಇಬ್ಬನಿ ಬೀಳಲಾರಂಭಿಸಿತು. ಹೀಗಾಗಿ ಬೌಲರ್‌ಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ನಾವು ಕಳೆದ ಪಂದ್ಯಕ್ಕಿಂತಲೂ ಚೆನ್ನಾಗಿಯೇ ಪ್ರದರ್ಶನ ನೀಡಿದೆವು. ಇನ್ನೂ ಕೆಲವೊಂದು ವಿಭಾಗಗಳಲ್ಲಿ ನಾವು ಚೆನ್ನಾಗಿ ಪ್ರದರ್ಶನ ತೋರಬಹುದಿತ್ತು.
ಬ್ಯಾಟಿಂಗ್‌ನಲ್ಲಿ ನಾವು 350+ ರನ್ ಬಾರಿಸಿದ್ದು ಒಳ್ಳೆಯ ಪ್ರದರ್ಶನ. ಆದರೆ ಕಳೆದ ಪಂದ್ಯದ ಬಳಿಕ ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಇದೇ ವಿಚಾರವನ್ನು ಚರ್ಚಿಸಿದ್ದೆವು. ಯಾಕೆಂದರೆ ಒದ್ದೆಯಾದ ಚೆಂಡಿನಲ್ಲಿ ಬೌಲಿಂಗ್ ಮಾಡುವಾಗ ಇನ್ನೂ 20-25 ರನ್ ಹೇಗೆ ಗಳಿಸಬೇಕು ಎನ್ನುವುದನ್ನು ಚರ್ಚಿಸಿದ್ದೆವು ಎಂದು ರಾಹುಲ್ ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದು ನಮ್ಮ ಪಾಲಿಗೆ ಕೊಂಚ ದುಬಾರಿಯಾಯಿತು ಎಂದು ಕೆ ಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.ಆದರೆ ಇದೇ ವೇಳೆ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಕೊಂಡಾಡಿದ್ದಾರೆ. ಋತುರಾಜ್ ಬ್ಯಾಟಿಂಗ್ ಆಡಿದ ರೀತಿ ನೋಡಿದಾಗ ಖುಷಿಯಾಯಿತು. ಇನ್ನು ವಿರಾಟ್ ಕೊಹ್ಲಿ ಆ ರೀತಿ 53 ಬಾರಿ ಮಾಡಿ ತೋರಿಸಿದ್ದಾರೆ. ಅವರು ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಋತುರಾಜ್ ಕೂಡಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು ಎಂದು ರಾಹುಲ್ ಹೇಳಿದ್ದಾರೆ.
ಕೊಹ್ಲಿ ಅವರ ಏಕದಿನ ವೃತ್ತಿಜೀವನದಲ್ಲಿ ಅವರು ಸಿಡಿಸಿದ 53 ಶತಕಗಳಲ್ಲಿ ಭಾರತ 8 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ ಮತ್ತು ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಪ್ರಸ್ತುತ ವರ್ಷದಲ್ಲಿ ಕೊಹ್ಲಿ 12 ಏಕದಿನ ಪಂದ್ಯಗಳಲ್ಲಿ 58.60 ಸರಾಸರಿ ಮತ್ತು 92.72 ಸ್ಟ್ರೈಕ್ ರೇಟ್‌ನಲ್ಲಿ 586 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿವೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯು ಪ್ರಸ್ತುತ 1-1 ರಲ್ಲಿ ಸಮಬಲಗೊಂಡಿದೆ. ಮೂರನೇ ಮತ್ತು ನಿರ್ಣಾಯಕ ಪಂದ್ಯವು ಶನಿವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ.



