ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

0
Sowing seed distribution started at subsidized rate in agriculture center
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಪಟ್ಟಣ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಮಳೆ ಹದವಾಗಿ ಆಗಿದ್ದು, ಬಹುತೇಕ ರೈತರು ಬೀಜ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಭೂಮಿಯನ್ನು ಹದಗೊಳಿಸಿಕೊಂಡಿರುವ ರೈತರು ಬಿತ್ತನೆ ಮಾಡಲು ಅಣಿಯಾಗುತ್ತಿದ್ದಾರೆ. ಅದಕ್ಕಾಗಿ ಕೃಷಿ ಕೇಂದ್ರದಲ್ಲಿ ದೊರೆಯುವ ರಿಯಾಯತಿ ದರದ ಬಿತ್ತನೆ ಬೀಜಗಳನ್ನು ಕೊಳ್ಳಲು ಸೋಮವಾರ ಮುಂಜಾನೆಯಿಂದಲೇ ರೈತರು ಮುಗಿಬಿದ್ದಿರುವದು ಕಂಡು ಬಂದಿತು.

ಕೃಷಿ ಕೇಂದ್ರದಲ್ಲಿ ಸೋಮವಾರದಿಂದ ರಿಯಾಯತಿ ದರದಲ್ಲಿ ಹೆಸರು ಮತ್ತು ತೊಗರಿ ಬೀಜಗಳನ್ನು ವಿತರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತರು ಬೀಜಗಳನ್ನು ಕೊಳ್ಳಲು ಕೃಷಿ ಕೇಂದ್ರಕ್ಕೆ ದೌಡಾಯಿಸಿದ್ದರು.

ತಾಲೂಕಿನಲ್ಲಿ ಹೆಚ್ಚಾಗಿ ಹೆಸರು ಶೇಂಗಾ, ತೊಗರಿ, ಬಿತ್ತನೆಗೆ ಇದೀಗ ಸಕಾಲವಾಗಿದ್ದು, ರೈತರು ಸಾಕಷ್ಟು ಸಂಖ್ಯೆಯಲ್ಲಿ ಕೃಷಿ ಕೇಂದ್ರಕ್ಕೆ ಆಗಮಿಸಿದ್ದರು. ಕಳೆದ ವರ್ಷ ಮುಂಗಾರು ಹಿಂಗಾರು ಮಳೆ ವಿಫಲವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಮುಂಗಾರು ರೈತರಲ್ಲಿ ಆಶಾಭಾವನೆ ಮೂಡಿಸಿದ್ದು, ಈ ಬಾರಿ ಒಟ್ಟಾರೆ 32.618 ಹೆಕ್ಟರ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಈಗಾಗಲೇ 15 ಕ್ವಿಂಟಲ್ ಶೇಂಗಾ, 30 ಕ್ವಿಂಟಲ್ ಹೆಸರು, 30 ಕ್ವಿಂಟಲ್ ತೊಗರಿ ಸಂಗ್ರಹವಿದ್ದು, ಎಲ್ಲ ರೈತರಿಗೂ ರಿಯಾಯತಿ ಬಿತ್ತನೆ ಬೀಜಗಳು ಲಭ್ಯವಾಗಲಿದೆ. ರೈತರು ತಮ್ಮ ಆಧಾರ್ ಕಾರ್ಡ್, ಉತಾರ ತಂದು ಸಬ್ಸಿಡಿ ರೂಪದಲ್ಲಿ ಬೀಜಗಳನ್ನು ಪಡೆಯಬೇಕು. ಇಲಾಖೆಗೆ ಇನ್ನೂ ಅವಶ್ಯಕ ಪ್ರಮಾಣದಲ್ಲಿ ಬಿತ್ತನೆ ಬೀಜಗಳು ಬರಲಿದ್ದು, ಯಾವುದೇ ರೀತಿಯಲ್ಲಿ ರೈತರು ಆತಂಕಕ್ಕೊಳಗಾಗದೆ ಎಲ್ಲರೂ ಸಹಕಾರದಿಂದ ಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಮಾಹಿತಿ ನೀಡಿದ್ದಾರೆ.

ಈಗಾಗಲೇ ರೈತರು ಬಿತ್ತನೆ ಬೀಜ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಿದ್ದಾರೆ. ಸರಕಾರ ರೈತರಿಗೆ ಗುಣಮಟ್ಟದ ಬೀಜಗಳನ್ನು ವಿತರಣೆ ಮಾಡಬೇಕು. ಒಬ್ಬ ರೈತರಿಗೆ 3 ಪ್ಯಾಕೆಟ್ ಬಿತ್ತನೆ ಬೀಜಗಳು ನೀಡಲಾಗುತ್ತಿದ್ದು, ಅದರ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ಬೀಜಗಳಿಗೆ ಬರುವ ರೈತರಿಗೆ ನೆರಳು ದೊರೆಯುವಂತೆ ಶೆಡ್ ನಿರ್ಮಾಣ ಮಾಡಬೇಕು.
– ಟಾಕಪ್ಪ ಸಾತಪೂತೆ.
ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ.


Spread the love

LEAVE A REPLY

Please enter your comment!
Please enter your name here