ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ಮಾಲೀಕತ್ವದಲ್ಲಿರವ ಆಸ್ತಿಗಳ ಕುರಿತ ಚರ್ಚೆಗಾಗಿ ಶುಕ್ರವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆ, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ಕೆಸರೆರಚಾಟಕ್ಕೆ ಸಾಕ್ಷಿಯಾಯಿತು. ಸಾಮಾನ್ಯ ಸಭೆಯಲ್ಲಿ ಚರ್ಚೆಯ ವಿಷಯವೇ ಸ್ಪಷ್ಟವಾಗಿಲ್ಲ ಎನ್ನುವ ಕಾರಣಕ್ಕೆ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ಮುಗಿಲು ಮುಟ್ಟಿತು. ಇದರ ನಡುವೆ ಸಭೆಯಲ್ಲಿ ಒಮ್ಮತದ ನಿರ್ಧಾರ ತಾಳಲು ಸಾಧ್ಯವಾಗದೇ ಸಭೆ ಮುಕ್ತಾಯ ಕಂಡಿತು.
ಸಭೆಯ ಆರಂಭದಲ್ಲಿಯೇ ಪ್ರತಿಪಕ್ಷ ನಾಯಕ ಎಲ್.ಡಿ. ಚಂದಾವರಿ ಮಾತನಾಡಿ, ವಿಶೇಷ ಸಾಮಾನ್ಯ ಸಭೆ ಕರೆದಿರುವುದು ಸೂಕ್ತ ನಿರ್ಧಾರವಾಗಿದ್ದರೂ ಯಾವ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಮುನ್ಸಿಪಲ್ ಕಾಯಿದೆ 1964ರ ಕಲಂ 48ರ ಪ್ರಕಾರ, ಸಾಮಾನ್ಯ ಸಭೆಯಲ್ಲಿ ಚರ್ಚೆಯ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಆದರೆ ಇಲ್ಲಿ ನಗರಸಭೆ ಮಾಲಿಕತ್ವದ ಆಸ್ತಿಗಳ ಕುರಿತು ಚರ್ಚೆ ಎಂದಷ್ಟೇ ಉಲ್ಲೇಖಿಸಲಾಗಿದೆ. ನಗರಸಭೆ ಮಾಲೀಕತ್ವದಲ್ಲಿ ಸುಮಾರು 1 ಸಾವಿರ ಆಸ್ತಿಗಳಿದ್ದು, ಇಲ್ಲಿ ಯಾವ ಆಸ್ತಿ ಬಗ್ಗೆ ಚರ್ಚೆ ನಡೆಯಲಿದೆ? ನಗರಸಭೆಗೆ ಹೊಸದಾಗಿ ಸದಸ್ಯರು ಬಂದಿದ್ದಾರೆ. ಅವರಿಗೆ ಮಾಹಿತಿ ನೀಡದೆ ಚರ್ಚೆಗೆ ಆಹ್ವಾನಿಸಿದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷೆ ಉಷಾ ದಾಸರ ನಿರ್ಣಯ ಮಂಡಿಸಿ ಸಭೆಯಿಂದ ಹೊರ ನಡೆಯುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಪೌರಾಯುಕ್ತರಿಗೆ ದಿಗ್ಬಂಧನ ವಿಧಿಸಿದರು. ನಿಯಮ 48ರ ಅಡಿ ಸಭೆ ಕರೆದಿದ್ದು ಸರಿಯಿದೆಯೇ ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಪಟ್ಟುಹಿಡಿದರು. ಅಂತಿಮವಾಗಿ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಮಾರುತಿ ಬ್ಯಾಕೋಡ್, ಅಧ್ಯಕ್ಷರ ಸೂಚನೆ ಮೇರೆಗೆ ಸಾಮಾನ್ಯ ಸಭೆ ಕರೆಯಲಾಗಿದೆ. ಚರ್ಚೆಯ ವಿಷಯವನ್ನೂ ತಿಳಿಸಲಾಗಿದೆ. ಆದರೂ ನಿಯಮ ಮೀರಿ ಸಭೆ ನಡೆಸಲಾಗಿದೆ ಎಂದರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಸ್ಪಷ್ಟಪಡಿಸಿದರು.
ಅಧ್ಯಕ್ಷರಿಂದ ನಿರ್ಣಯ ಮಂಡನೆ
ಕಾಂಗ್ರೆಸ್ ಸದಸ್ಯರ ವರ್ತನೆಯಿಂದ ಬೇಸತ್ತ ಬಿಜೆಪಿ ಸದಸ್ಯರು ನಗರಸಭೆ ಆಸ್ತಿ ಗುಳುಂ ಮಾಡಿದ ಸಚಿವ ಎಚ್.ಕೆ. ಪಾಟೀಲರಿಗೆ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಎಚ್.ಕೆ. ಪಾಟೀಲರಿಗೆ ಜೈಕಾರವನ್ನೂ ಕೂಗಿದರು.ಈ ನಡುವೆ ಮಧ್ಯಪ್ರವೇಶಿಸಿದ ನಗರಸಭಾಧ್ಯಕ್ಷೆ ಉಷಾ ದಾಸರ, ನಗರಸಭೆ ಮಾಲೀಕತ್ವದ ವಕಾರಸಾಲ ಆಸ್ತಿಯನ್ನು ಪ್ರಾಧಿಕಾರಕ್ಕೆ ವಹಿಸುವುದಿಲ್ಲ ಎನ್ನುವ ನಿರ್ಣಯ ಕೈಗೊಂಡರು. ಗದ್ದಲದ ಮಧ್ಯೆಯೂ ಆಡಳಿತ ಪಕ್ಷದ ಸದಸ್ಯರು ಕೈ ಎತ್ತಿ ತಮ್ಮ ಬೆಂಬಲ ಸೂಚಿಸುತ್ತಿದ್ದಂತೆ, ಅಧ್ಯಕ್ಷೆ ಉಷಾ ದಾಸರ ಸಭೆಯಿಂದ ನಿರ್ಗಮಿಸಿದರು.
ಆಡಳಿತ ಪಕ್ಷದ ಪರವಾಗಿ ಸದಸ್ಯ ಚಂದ್ರು ತಡಸದ ಮಾತನಾಡಿ, ಸರಕಾರ ನಗರಸಭೆ ಮಾಲೀಕತ್ವದ 34 ಎಕರೆ ವಕಾರಸಾಲು ಆಸ್ತಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದೆ. ಈ ಆಸ್ತಿ ರಕ್ಷಣೆ ವಿಷಯ ಚರ್ಚೆಗೆ ಅವಕಾಶ ಕೊಡಿ ಎನ್ನುತ್ತಿದ್ದಂತೆ ವಾಗ್ವಾದಕ್ಕೆ ನಾಂದಿಯಾಯಿತು. ನೋಟಿಸ್‌ನಲ್ಲಿ ಆ ವಿಷಯವೇ ಇಲ್ಲದೆ ಚರ್ಚೆ ನಡೆಸುವುದು ಹೇಗೆ ಎಂದು ಪ್ರಶ್ನಿಸಿ ಸದನದ ಬಾವಿಗಿಳಿದು ಧರಣಿ ನಡೆಸಿ, ಪೌರಾಯುಕ್ತರು ಈ ವಿಚಾರವಾಗಿ ಸ್ಪಷ್ಟನೆ ಕೊಡಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.