ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಪೂಜೆ, ಜಲಾಭಿಷೇಕ, ರಾತ್ರಿ 9 ಗಂಟೆಯಿಂದ (ಯಾಮಪೂಜೆ) ಲಘುರುದ್ರಾಭಿಷೇಕ ನಡೆಯಲಿದೆ. 11 ಜನ ಋತ್ವಿಜರು ಈ ಯಾಮಪೂಜೆಯನ್ನು ಮಧ್ಯರಾತ್ರಿಯವರೆಗೂ ನಡೆಸಲಿದ್ದು, ಬೆಳಗಿನವರೆಗೂ ಜಲಾಬಿಷೇಕ ನಡೆಯಲಿದೆ ಎಂದು ಅರ್ಚಕರಾದ ಸೋಮನಾಥ ಪೂಜಾರ ತಿಳಿಸಿದ್ದಾರೆ.
ಅದರಂತೆ ಪಟ್ಟಣದ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ 88ನೇ ತ್ರಿಮೂರ್ತಿ ಶಿವ ಜಯಂತಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ 5 ಅಡಿ ಎತ್ತರದ ವೈವಿಧ್ಯಮಯ ಅಲಂಕಾರದಲ್ಲಿ ಶ್ವೇತ ಶಿವಲಿಂಗ ದರ್ಶನ, ಕ್ಷೀರಾಭಿಷೇಕ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಶಿವದ್ವಜಾರೋಹಣ ಮತ್ತು 21 ಶಿವಲಿಂಗಗಳ ಶಾಂತಿಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಶಿವಲಿಂಗಗಳಿಗೆ ವಿಶೇಷ ಪೂಜೆ, ಪ್ರಾತಃಕಾಲ ಶ್ರೀ ಜಗದ್ಗುರು ಪಂಚಾಚಾರ್ಯ ದ್ವಜಾರೋಹಣ, ಲಿಂ. ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳಿಗ್ಗೆ 9ಕ್ಕೆ ಶಿವದೀಕ್ಷೆ, ಅಯ್ಯಾಚಾರ ಜರುಗುವುದು. ಸಂಜೆ 5ಕ್ಕೆ ಜ. ಪಂಡಿತಾರಾಧ್ಯರ ಮತ್ತು ವಿಶ್ವಾರಾಧ್ಯರ ಜಯಂತಿ ನಿಮಿತ್ತ ರಥೋತ್ಸವ ಜರುಗುವುದು. ರಾತ್ರಿ ಮಾನವ ಧರ್ಮ ಮಂಟಪದಲ್ಲಿ ಜ.ರೇಣುಕಾಚಾರ್ಯರು, ಶ್ರೀ ಜಗದ್ಗುರುಗಳವರ ಮಂಗಳಮೂರ್ತಿಗೆ ಮಹಾರುದ್ರಾಭಿಷೇಕ, ಪಟ್ಟಾಧ್ಯಕ್ಷರ ಸಡಗರದ ಮಹಾಶಿವಪೂಜೆ, ನಾಮಸ್ಮರಣೆ ಜರುಗಲಿದೆ.