HomeGadag Newsಉಚಿತ ಪಾಠ ಬೋಧನೆ ನಿತ್ಯ ನಿರಂತರ : ಶಿವಕುಮಾರ ಎಚ್.ಪಾಟೀಲ

ಉಚಿತ ಪಾಠ ಬೋಧನೆ ನಿತ್ಯ ನಿರಂತರ : ಶಿವಕುಮಾರ ಎಚ್.ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಬಿ.ಜಿ. ಅಣ್ಣಿಗೇರಿ ಗುರುಗಳ ಗುರುಕುಲ ಆಶ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಪಾಠ ಬೋಧನೆ ನಿತ್ಯ ನಿರಂತರವಾಗಿ ಮುನ್ನಡೆಯಲಿದೆ ಎಂದು `ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಗದಗ’ದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಹೇಳಿದರು.
ಅವರು ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಆಧ್ಯಾತ್ಮ ಮತ್ತು ಶೈಕ್ಷಣಿಕ ಚಿಂತನ ಮಾಲಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿ.ಜಿ. ಅಣ್ಣಿಗೇರಿ ಗುರುಗಳು ಗದುಗಿನ ಸಿ.ಎಸ್. ಪಾಟೀಲ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಲ್ಲದೆ ತಾವು ವಾಸವಾಗಿದ್ದ ಕೊಠಡಿಯಲ್ಲಿ ತಮ್ಮೊಂದಿಗೆ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಪಾಠ ಬೋಧನೆ ಪ್ರಾರಂಭಿಸಿದರು. ಕಾಲಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಅದು ಗುರುಕುಲ ಮಾದರಿಯಲ್ಲಿ ನಡೆದು ಬಂದಿರುವದು ಇತಿಹಾಸ ಎಂದು ಬಣ್ಣಿಸಿದರು.
ಗದಗ-ಬೆಟಗೇರಿ ಅವಳಿ ನಗರ ಅಷ್ಟೇ ಅಲ್ಲದೆ ಗದಗ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಮುನ್ನ, ಶಾಲೆ ಬಿಟ್ಟ ನಂತರ ಆಶ್ರಮದಲ್ಲಿ ಟ್ಯೂಶನ್ ಹೇಳಿಸಿಕೊಂಡು ಮುಂದೆ ಅವರು ಉನ್ನತ ಶಿಕ್ಷಣ ಪಡೆದು ದೊಡ್ಡ ಸ್ಥಾನದಲ್ಲಿರುವದು ಹೆಮ್ಮೆಯ ಸಂಗತಿ ಎಂದರು.
ಗುರುಗಳ ತರುವಾಯ ಈ ಆಶ್ರಮವನ್ನು ಪ್ರತಿಷ್ಠಾನದ ಗೌರವ ಅಧ್ಯಕ್ಷರಾಗಿರುವ ಗದುಗಿನ ಜ. ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಕೃಪಾಪೋಷಣೆಯೊಂದಿಗೆ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳು, ಗುರುಗಳ ಹಳೇ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಸಾಕಷ್ಟು ಅಭಿವೃದ್ಧಿಯೊಂದಿಗೆ ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಆಶ್ರಮದಲ್ಲಿ ಪಾಠ ಹೇಳಿಸಿಕೊಂಡ ಬಹುತೇಕ ವಿದ್ಯಾರ್ಥಿಗಳು ಟಾಪರ್ ಹಾಗೂ ಪ್ರಥಮ ದರ್ಜೆಯಲ್ಲಿ ಪಾಸಾಗಿರುವದು ಹೆಮ್ಮೆಯ ಸಂಗತಿ.
ಗುರುಗಳು ಇದ್ದಾಗ ಮತ್ತು ಅವರ ತರುವಾಯ ಅವರ ಶಿಷ್ಯ ಬಳಗ ಆಶ್ರಮಕ್ಕೆ ಬಂದು ಮಕ್ಕಳಿಗೆ ಉಚಿತ ಪಾಠ ಹೇಳುತ್ತಿರುವದು ಅಭಿನಂದನೀಯ ಎಂದರಲ್ಲದೆ, ಉಚಿತ ಟ್ಯೂಶನ್‌ಗೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಅದಕ್ಕಾಗಿ ಆಶ್ರಮದ ಮೇಲ್ಚಾವಣಿಯಲ್ಲೂ ಪಾಠ ಮುಂದುವರೆಸಲಾಗಿದೆ ಎಂದು ಹೇಳಿದರು.
ಗದಗ ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳಲ್ಲಿ ಅಧ್ಯಯನ ಮಾಡಿ ಶಾಲೆಗೆ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರವಾಗಿ ನಗದು ಬಹುಮಾನ ಹಾಗೂ ಕಲಿಕಾ ಸಾಮಗ್ರಿಗಳನ್ನು ಕಳೆದೆರಡು ವರ್ಷಗಳಿಂದ ನೀಡುತ್ತಿದ್ದು ಈ ವರ್ಷವೂ ಜೂನ್ ಎರಡನೇ ವಾರದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದರು.
ಸಮಾರಂಭದಲ್ಲಿ ಪ್ರತಿಷ್ಠಾನದ ಉಪಾಕ್ಷರೂ ಬಿ.ಜಿ.ಅಣ್ಣಿಗೇರಿ ಗುರುಗಳ ಸಹೋದರರೂ ಆದ ಶಂಕ್ರಪ್ಪ ಜಿ.ಅಣ್ಣಿಗೇರಿ, ಕಾರ್ಯದರ್ಶಿ ಶಿವಪ್ಪ ಕತ್ತಿ, ಖಜಾಂಚಿ ಸಿದ್ಧಲಿಂಗನಗೌಡ ಪಾಟೀಲ, ನಿರ್ದೆಶಕರಾದ ಶಿವಾನಂದ ದಂಡಿನ, ವಿರುಪಾಕ್ಷಪ್ಪ ಮ್ಯಾಗೇರಿ, ಚನ್ನಪ್ಪ ಮಲ್ಲಾಡದ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಕ್ಷಪ್ಪ ಶಾಂತಗೇರಿ, ಕಳಕಪ್ಪ ಕುರ್ತಕೋಟಿ, ಬಸವರಾಜ ಬಿಂಗಿ, ಸಿದ್ದಣ್ಣ ಕವಲೂರ, ರವಿ ದಂಡಿನ ಉಪಸ್ಥಿತರಿದ್ದು ಆಶ್ರಮದ ಪ್ರಗತಿ ಪರಿಶೀಲನೆ, ಪ್ರತಿಭಾ ಪುರಸ್ಕಾರದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.
ವಸತಿ, ಊಟದೊಂದಿಗೆ ಪಾಠವೂ ಉಚಿತ
ಆಶ್ರಮದಲ್ಲಿ 8ರಿಂದ 10ನೇ ತರಗತಿಯ ಸುಮಾರು 300ಕ್ಕೂ ಹೆಚ್ಚು ಮಕ್ಕಳಿಗೆ ನಿತ್ಯ ಉಚಿತ ಪಾಠ ಹೇಳಲಾಗುತ್ತಿದೆ. ಗ್ರಾಮೀಣ ಪ್ರದೇಶದ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಆಶ್ರಮದಲ್ಲಿದ್ದು, ಅವರಿಗೆ ಉಚಿತ ವಸತಿ, ಊಟ, ಪಾಠ ವ್ಯವಸ್ಥೆ ಮಾಡಲಾಗಿದೆ.ಇದಕ್ಕೆ ದಾನಿಗಳ ಸಹಕಾರವೂ ಇದೆ.
– ಶಂಕ್ರಪ್ಪ ಜಿ.ಅಣ್ಣಿಗೇರಿ.
ಪ್ರತಿಷ್ಠಾನದ ಉಪಾಧ್ಯಕ್ಷರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!