ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆಗಳಲ್ಲಿ ಗ್ರಾಮೀಣ ಪ್ರದೇಶಗಳ ಯುವಕರನ್ನು ಆಸಕ್ತಿಯಿಂದ ಬಳಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸದರ ಕ್ರೀಡಾ ಮಹೋತ್ಸವ ಏರ್ಪಡಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಕ್ರೀಡಾ ಮಹೋತ್ಸವ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಸದರ ಕ್ರೀಡಾ ಮಹೋತ್ಸವದ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರ ಕ್ರೀಡೆಗೆ ಮಹತ್ವ ನೀಡಿದೆ. ಕಳೆದ ಹತ್ತು ವರ್ಷದಿಂದ ಫಿಟ್ ಇಂಡಿಯಾ ಕಾರ್ಯಕ್ರಮ ಮಾಡಿದ್ದೆವು. ನಂತರ ಖೇಲೊ ಇಂಡಿಯಾ, ಜೀತೊ ಇಂಡಿಯಾ ಮಾಡಿದೆವು. ಅದರಿಂದ ಒಲಂಪಿಕ್‌ನಲ್ಲಿ ಭಾರತ ಹೆಚ್ಚು ಮೆಡಲ್ ಪಡೆಯಲು ಸಾಧ್ಯವಾಯಿತು. ಈಗ ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಆಸಕ್ತಿಯಿಂದ ಬಳಸಿಕೊಳ್ಳಲು ಸಂಸದರ ಕ್ರೀಡೋತ್ಸವ ಮಾಡಿದ್ದಾರೆ. ಈ ಕ್ರೀಡೆ ಹೋಬಳಿಯಿಂದ ತಾಲೂಕು ಮಟ್ಟ, ಅಲ್ಲಿಂದ ಜಿಲ್ಲಾ ಮಟ್ಟದಲ್ಲಿರುತ್ತದೆ. ಇದಕ್ಕೆ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಸಹಕಾರ ಬೇಕು. ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಮಂಗಳವಾರದಿಂದಲೇ ನೋಂದಣಿ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಜಿಲ್ಲಾ ಯುವಜನ, ಕ್ರೀಡಾ ಮತ್ತು ಸೇವಾ ಇಲಾಖೆಯ ಅಧಿಕಾರಿ ಶರಣು ಗೊಗೇರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇರುವ ಒಳ್ಳೆಯ ತಂಡಗಳನ್ನು ಆಹ್ವಾನಿಸಿ, ಹೆಚ್ಚು ಯುವಕ-ಯುವತಿಯರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಎಲ್ಲ ತಂಡಗಳಿಗೂ ಟಿಶರ್ಟ್ ನೀಡಬೇಕು. ವಿಜೇತರಾದ ತಂಡಗಳಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಬೇಕು. ಕೊನೆಯ ದಿನ ಸರ್ಕಾರಿ ನೌಕರರಿಗೆ ಒಂದು ದಿನ ಪ್ರದರ್ಶನ ಮ್ಯಾಚ್ ಆಡಿಸಿ ಅವರಿಗೂ ಬಹುಮಾನ ವಿತರಿಸುವ ಸಿದ್ಧತೆಯಾಗಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.



