ಉನ್ನತ ಗುರಿ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ : ರಂಭಾಪುರಿ ಶ್ರೀಗಳು

0
Sri Jagadguru Renukacharya Jayantyutsava Closing Ceremony
Spread the love

ವಿಜಯಸಾಕ್ಷಿ ಸುದ್ದಿ, ಚಿಂಚೋಳಿ : ಭವಿಷ್ಯವನ್ನು ನಿರ್ಮಿಸುವ ಶಕ್ತಿ ಯುವ ಜನಾಂಗದಲ್ಲಿದೆ. ಉನ್ನತವಾದ ಗುರಿಯ ದಾರಿಯಲ್ಲಿ ನಡೆದರೆ ಜೀವನ ಉಜ್ವಲಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ನಗರದ ಹಾರಕೂಡ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನ ಬುದ್ಧಿಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯುತ್ತಿಲ್ಲ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆದರ್ಶ ಚಿಂತನೆ ಮತ್ತು ನಿರಂತರ ಪ್ರಯತ್ನ ಬೇಕು. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಂಸ್ಕಾರಯುಕ್ತ ಜೀವನಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ. ಯುವ ಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ. ಅವರಿಗೆ ಉತ್ತಮವಾದ ಸಂಸ್ಕಾರ ಕೊಡುವ ಅಗತ್ಯವಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ನೀತಿ ಸೂತ್ರಗಳನ್ನು ಬೋಧಿಸಿದ್ದಾರೆ. ಹಿರಿಯರ ಮೌಲ್ಯಾಧಾರಿತ ಚಿಂತನಗಳು ಬಾಳಿನ ಆಶಾದೀಪ. ಸ್ವಾರ್ಥ ರಹಿತ ಬದುಕಿಗೆ ಬೆಲೆಯಿದೆ, ಬಲವಿದೆ. ದೇಶ-ಧರ್ಮ ಇವೆರಡೂ ಮನುಷ್ಯನ ಎರಡು ಕಣ್ಣಿದ್ದಂತೆ. ಇವೆರಡನ್ನು ಎಲ್ಲರೂ ಬೆಳೆಸಿ ಬಲಗೊಳಿಸುವ ಅಗತ್ಯವಿದೆ ಎಂದರು.
ಸಮ್ಮುಖ ವಹಿಸಿದ ಹಾರಕೂಡ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಿರ್ಭೀತವಾಗಿ ಬದುಕುವುದೇ ನಿಜವಾದ ಬದುಕು. ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವನ ಶ್ರೇಯಸಿಗೆ ದಾರಿದೀಪ. ಶ್ರೀ ಗುರು ಅರಿವಿನ ಚೈತನ್ಯದ ಪ್ರತೀಕ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ದರ್ಶನದ ಸಂದೇಶಗಳು ನಮ್ಮೆಲ್ಲರ ಬಾಳಿನ ಭಾಗ್ಯೋದಯಕ್ಕೆ ಆಶಾಕಿರಣವೆಂದರು.
ನಿಡಗುಂದಾ ಕರುಣೇಶ್ವರ ಶಿವಾಚಾರ್ಯರು, ಚಂದನಕೇರಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ನರನಾಳ ಶಿವಕುಮಾರ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ ಯುಗಮಾನೋತ್ಸವ ಸಮಿತಿ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಮಾತನಾಡಿ, ಪ್ರತಿ ವರ್ಷವೂ ಜಯಂತ್ಯುತ್ಸವ ಆಚರಿಸಬೇಕೆಂಬ ಸತ್ಯ ಸಂಕಲ್ಪ ನಮ್ಮದಾಗಿದೆ. ಎಲ್ಲರ ಸಹಕಾರ ಸೇವೆ ಮನ ಮುಟ್ಟಿ ಮಾಡಿದರೆ ಯಶಸ್ಸು ನಿಶ್ಚಿತ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ, ಶ್ರೀರಕ್ಷೆ ನಮ್ಮೆಲ್ಲರ ಬಾಳಿಗೆ ಶಕ್ತಿ ತುಂಬಲೆಂದು ಬಯಸುತ್ತೇನೆ ಎಂದರು.
ಸಮಾರಂಭಕ್ಕೂ ಮುನ್ನ ಲೋಕ ಕಲ್ಯಾಣ-ವಿಶ್ವ ಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿದರು. 25 ಜನ ವೀರಮಾಹೇಶ್ವರ ಜಂಗಮ ವಟುಗಳಿಗೆ ವೀರಶೈವ ಧರ್ಮ ಪರಂಪರೆಯಂತೆ ಶಿವದೀಕ್ಷಾ ನೆರವೇರಿಸಲಾಯಿತು. ಹಾರಕೂಡ ಹಿರೇಮಠದಿಂದ ಅನ್ನ ದಾಸೋಹ ಜರುಗಿತು.

Spread the love
Advertisement

LEAVE A REPLY

Please enter your comment!
Please enter your name here