ಬೆಂಗಳೂರು: ತಮ್ಮ ವಿರುದ್ಧ ಪ್ರಕಟವಾಗಿರುವ ಮಾನಹಾನಿಕರ ಸುದ್ದಿ ಹಾಗೂ ಸಂಬಂಧಿತ ಯುಆರ್‌ಎಲ್‌ಗಳನ್ನು ಆನ್‌ಲೈನ್‌ನಿಂದ ತೆರವುಗೊಳಿಸುವಂತೆ ಕೋರಿ ಶ್ರೀಲಂಕಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಹೆಚ್.ಎಂ. ದಿಲೀಪ್ ನವಾಜ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ನ್ಯಾಯಪೀಠ, ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ, ಗೂಗಲ್ ಇಂಕ್, ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾ ಈನ್ಯೂಸ್ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಅಲ್ಲದೆ, ಅರ್ಜಿದಾರರ ಪರ ವಕೀಲರು ಕೊಲಂಬೊ ಟೆಲಿಗ್ರಾಫ್ ಹಾಗೂ ಲಂಕಾ ಈನ್ಯೂಸ್‌ಗೆ ಈ-ಮೇಲ್ ಮೂಲಕ ನೋಟಿಸ್ ಕಳುಹಿಸಬೇಕೆಂದು ಸೂಚಿಸಿ, ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಲಾಗಿದೆ.
ಅರ್ಜಿದಾರರು ತಮ್ಮ ಅರ್ಜಿಯಲ್ಲಿ, ಶ್ರೀಲಂಕಾದಿಂದ ಗಡಿಪಾರುಗೊಂಡ ಇಬ್ಬರು ಪತ್ರಕರ್ತರು ನಡೆಸುತ್ತಿರುವ ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾ ಈನ್ಯೂಸ್ ಸುದ್ದಿ ತಾಣಗಳು 2015 ಮತ್ತು 2020ರಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿವೆ ಎಂದು ಆರೋಪಿಸಿದ್ದಾರೆ. ಈ ಲೇಖನಗಳೊಂದಿಗೆ ಸಂಬಂಧಿಸಿದ ಒಟ್ಟು ನಾಲ್ಕು ಸುದ್ದಿಗಳನ್ನು ಆನ್‌ಲೈನ್‌ನಿಂದ ತೆಗೆದುಹಾಕುವಂತೆ ಹಾಗೂ ಸಂಬಂಧಿತ ಯುಆರ್‌ಎಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ನಿರ್ದೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂಬಂಧ 2023ರಲ್ಲಿ ಗೂಗಲ್ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ ಎಂದು ಅವರು ಹೇಳಿದ್ದಾರೆ. ಗೂಗಲ್ ಸಂಸ್ಥೆಯ ಭಾರತದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಇರುವ ಕಾರಣದಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ವಿವರಿಸಿದ್ದಾರೆ.
ಶ್ರೀಲಂಕಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿರುವುದರಿಂದ ತಮ್ಮ ದೇಶದಲ್ಲೇ ಮಾನಹಾನಿ ಪ್ರಕರಣ ದಾಖಲಿಸುವುದು ನೈತಿಕವಾಗಿ ಸರಿಯಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಕ್ರಮ ನ್ಯಾಯಾಂಗ ನೈತಿಕತೆಗೆ ವಿರುದ್ಧವಾಗುವ ಸಾಧ್ಯತೆ ಇರುವುದರಿಂದ ಭಾರತದ ನ್ಯಾಯಾಲಯವನ್ನು ಆಶ್ರಯಿಸಿದ್ದಾಗಿ ಅವರು ತಿಳಿಸಿದ್ದಾರೆ.
ಇನ್ನೂ, ತಮ್ಮ ವಿರುದ್ಧ ನಡೆದಿರುವ ಅಪಪ್ರಚಾರದಿಂದ ತಮ್ಮ ವೈಯಕ್ತಿಕ ಘನತೆ ಮಾತ್ರವಲ್ಲದೆ ನ್ಯಾಯಾಂಗದ ಪಾವಿತ್ರ್ಯಕ್ಕೂ ಧಕ್ಕೆ ಉಂಟಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಸಂವಿಧಾನದ ವಿಧಿ 21ರಡಿ ನೀಡಿರುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ವಿದೇಶಿಯರಿಗೂ ಅನ್ವಯವಾಗುವುದರಿಂದ ತಮ್ಮ ಅರ್ಜಿಯನ್ನು ಭಾರತೀಯ ನ್ಯಾಯಾಲಯ ವಿಚಾರಣೆ ನಡೆಸಬಹುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.



