ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಭರಮದೇವರ ವೃತ್ತದ ಹತ್ತಿರ ಉರ್ದು ಶಾಲೆ ಪಕ್ಕದಲ್ಲಿರುವ ಸಿಟಿಎಸ್ ನಂ. 21/1ಎ ನೇದ್ದರ ಪುರಸಭೆ ಜಾಗೆಯಲ್ಲಿ ಅಂಜುಮನ್ ಏ ಇಸ್ಲಾಂ ಕಮಿಟಿಯಿಂದ 6 ಮಳಿಗೆಗಳ ಕಟ್ಟಡವನ್ನು ಪುರಸಭೆಯಿಂದ ಯಾವುದೇ ಅನುಮತಿ ಇಲ್ಲದೆ ನಿರ್ಮಾಣ ಮಾಡಿದ್ದು, ಕೂಡಲೇ ಅದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಶ್ರೀರಾಮ ಸೇನಾ ಕಾರ್ಯಕರ್ತರು ಗದಗನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಆಗ್ರಹಿಸಿದರು.
ಇದು ಪುರಸಭೆಯ ಜಾಗೆಯಾಗಿದ್ದು, ಇದರಿಂದ ಪುರಸಭೆಗೆ ಬರುವ ಆದಾಯವೂ ಇಲ್ಲದಂತಾಗಿದೆ. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನೂ ಪಡೆದುಕೊಳ್ಳದೇ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಪುರಸಭೆಯ ಈ ಜಾಗೆಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಅದೇ ಜಾಗೆಯಲ್ಲಿ ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಗ್ರಂಥಾಲಯ ಅಥವಾ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬಹುದು ಎಂದು ಮನವಿಯಲ್ಲಿ ವಿನಂತಿಸಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮನವಿ ಸ್ವೀಕರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ತಾಲೂಕಾ ಸಂಚಾಲಕ ಈರಣ್ಣ ಪೂಜಾರ, ಅರುಣ ಮೆಕ್ಕಿ, ಅಮಿತ್ ಗುಡಗೇರಿ, ಫಕ್ಕೀರೇಶ ಅಣ್ಣಿಗೇರಿ, ಮುತ್ತು ಕರ್ಜೆಕಣ್ಣವರ, ಪ್ರಾಣೇಶ ವ್ಯಾಪಾರಿ, ಮಂಜು ಬಳಿಗಾರ, ಸೋಮು ಗೌರಿ, ಕಿರಣ ಹಿರೇಮಠ ಸೇರಿದಂತೆ ಅನೇಕರಿದ್ದರು.