ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಕುಂದ್ರಳ್ಳಿ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಶ್ರೀದೇವಿಯ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ಇದರಲ್ಲಿ ದೇವತೆಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ. ಪ್ರತಿಯೊಂದು ದೇವತೆಗೂ ವಿಶಿಷ್ಟವಾದ ಶಕ್ತಿಗಳಿದ್ದು, ಅವುಗಳ ಆರಾಧನೆಯಿಂದ ಶಾಂತಿ, ನೆಮ್ಮದಿ ಲಭಿಸುತ್ತದೆ. ಈ 9 ದಿನಗಳ ಕಾಲ ದೇವಿಯ ಆರಾಧನೆಯ ಜೊತೆಗೆ ಪುರಾಣ ಪಠಣ, ಪುರಾಣಗಳ ಶ್ರವಣ ಮಾಡುವದು ಹೆಚ್ಚು ಫಲದಾಯಕವಾಗಿರುತ್ತದೆ. ಈ ಹಬ್ಬದಲ್ಲಿ ಪುರಾಣ ಪ್ರವಚನಗಳನ್ನು ಸಂಘಟಿಸುವದರ ಜೊತೆಗೆ ಜನರು ಧಾರ್ಮಿಕ ವಿಚಾರಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕಾರ್ಯಗಳು ನಡೆಯುತ್ತಿವೆ. ಬನ್ನಿಮಹಾಂಕಾಳಿಯನ್ನು ಪೂಜಿಸಿ ಉತ್ತಮ ಫಲಗಳನ್ನು ಪಡೆಯುವ ಈ ಪವಿತ್ರ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ರಾಮಣ್ಣ ಲಮಾಣಿ ವಹಿಸಿದ್ದರು. ಶ್ರೀ ಸಿದ್ಧರಾಮ ದೇವರು ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಲಿಂಗರಾಜಗೌಡ್ರ ಪಾಟೀಲ, ತ್ರಿಶಾ ಪಾಟೀಲ, ಜಂಗ್ಲಿಸಾಬ ನದಾಫ್ ಮುಂತಾದವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರು ಹಾಗೂ ಎಂ.ಡಿ. ಪಾಟೀಲ ಮುಂತಾದವರಿದ್ದರು. ಪಂಚಾಕ್ಷರಿಶಾಸ್ತ್ರೀಜಿ ಹಿರೇಮಠ, ಅನಿಲಕುಮಾರ ಮಠಪತಿ, ಮನೋಹರ ಗುಲಬರ್ಗ ಇವರು ಪುರಾಣ ಪ್ರವಚನ, ಸಂಗೀತ ಸೇವೆ ನೀಡಿದರು.