ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾರೀ ವಿಚಾರ ಬಹಿರಂಗವಾಗಿದೆ. ಈ ಕೃತ್ಯದಲ್ಲಿ ಒಟ್ಟು 6 ಶಿಕ್ಷಕರು ಮತ್ತು 9 ವಿದ್ಯಾರ್ಥಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಕೆಲ ವಿದ್ಯಾರ್ಥಿಗಳು ಕೇವಲ 30 ರೂ.ಗೆ ಮಾರಾಟ ಮಾಡಿರುವ ಮಾಹಿತಿ ದೊರೆತಿದೆ. ಇನ್ನು ಕೆಲವರು 50, 100 ಮತ್ತು 150 ರೂ.ಗೆ ಪೇಪರ್ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ಈ ಅಕ್ರಮ ಮಾರಾಟದಿಂದ ಒಟ್ಟು ಸುಮಾರು 1500 ರೂ. ಸಂಗ್ರಹವಾಗಿದೆ ಎಂಬ ಮಾಹಿತಿ ಹೊರಬಂದಿದೆ.
ಈ ಪ್ರಕರಣ ಸಂಬಂಧ ಶಿಕ್ಷಕರ ಬ್ಯಾಂಕ್ ಖಾತೆಗಳನ್ನು ಸೈಬರ್ ಕ್ರೈಂ ಪೊಲೀಸರು ಪರಿಶೀಲಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆಗೆ ಹಣ ಪಡೆದಿರುವ ನೇರ ಸಾಕ್ಷ್ಯ ಮಾತ್ರ ಇನ್ನೂ ಲಭ್ಯವಾಗಿಲ್ಲ.
ಶಿಕ್ಷಕರು ತಮ್ಮ ಅಧಿಕೃತ ಐಡಿ ಬಳಸಿ ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಬಂಧಿತ ಶಿಕ್ಷಕರ ಕುಟುಂಬಸ್ಥರ ಬ್ಯಾಂಕ್ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ.
ಇನ್ನೂ, ಪ್ರಶ್ನೆಪತ್ರಿಕೆ ಪಡೆದ ವಿದ್ಯಾರ್ಥಿಗಳನ್ನು ಸಂಪರ್ಕಿಸಿದವರ ಬಗ್ಗೆ ಮಾಹಿತಿ ಸಂಗ್ರಹ ನಡೆಯುತ್ತಿದೆ. ಪ್ರಕರಣ ಬಹಿರಂಗವಾದ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳ ಐಡಿಗಳನ್ನು ಡಿಲೀಟ್ ಮಾಡಿದ್ದರೂ, ವಿದ್ಯಾರ್ಥಿಗಳ ಇನ್‌ಬಾಕ್ಸ್ ಆಧರಿಸಿ ಪೊಲೀಸರು ಸಂಪರ್ಕ ಪಟ್ಟಿ ತಯಾರಿಸಿದ್ದು, ಈಗ ಐಪಿ ಅಡ್ರೆಸ್ ಟ್ರೇಸ್ ಮಾಡುವ ಪ್ರಕ್ರಿಯೆ ಮುಂದುವರಿದಿದೆ.



