ಕಾಲ್ತುಳಿತ ಕೇಸ್: ಹೈಕಮಾಂಡ್ ಬುಲಾವ್..ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ಸಿಎಂ, ಡಿಸಿಎಂ!

0
Spread the love

ಬೆಂಗಳೂರು:- ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣವು ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ವಿಪಕ್ಷಗಳ ದಾಳಿ ಕೂಡ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ರಾಷ್ಟ್ರ‌ಮಟ್ಟದಲ್ಲೂ ಸರ್ಕಾರಕ್ಕೆ ಆರ್​ಸಿಬಿ ಕಾಲ್ತುಳಿತ ಕಪ್ಪು ಚುಕ್ಕೆಯಾಗಿದೆ. ಇದೇ ದುರ್ಘಟನೆಗೆ ಸಂಬಂಧಿಸಿದಂತೆ ಕೈ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ಅದರಂತೆ ತಮ್ಮ ವರಿಷ್ಠರ ಬುಲಾವ್​ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.

Advertisement

ಘಟನೆ ನಡೆದ ದಿನವೇ ಪ್ರಾಥಮಿಕ ಮಾಹಿತಿ ಪಡೆದಿದ್ದ ವರಿಷ್ಠರು, ಈಗ ಸಂಪೂರ್ಣ ವರದಿ ಪಡೆಯಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​,​ ರಾಹುಲ್ ಗಾಂಧಿಯನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ವರದಿ ಒಪ್ಪಿಸಲಿರುವ ಸಿಎಂ ಸಿದ್ದರಾಮಯ್ಯ:-

* ರಾಹುಲ್ ಗಾಂಧಿಗೆ ಕಾಲ್ತುಳಿತದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
* ಆರ್​ಸಿಬಿ ಪರೇಡ್, ವಿಧಾನಸೌಧ ಕಾರ್ಯಕ್ರಮ, ಚಿನ್ನಸ್ವಾಮಿ ವಿಜಯೋತ್ಸವದ ಬಗ್ಗೆ ವರದಿ ಸಲ್ಲಿಕೆ.
* ಘೋರ ಕಾಲ್ತುಳಿತದ ಟೈಮ್ ಲೈನ್ ವಿವರಿಸಲಿರುವ ಸಿಎಂ.
* ಕಾಲ್ತುಳಿತಕ್ಕೆ ಕಾರಣವೇನು? ಯಾರ ಲೋಪದೋಷ, ಎಲ್ಲಿ ಎಡವಿದ್ದು? ಕೆಎಸ್ಸಿಎ ಪಾತ್ರವೇನು? ರಾಜ್ಯ ಸರ್ಕಾರದ ಪಾತ್ರದ ಕುರಿತು ವರದಿ ಸಲ್ಲಿಕೆ.
* ಹಾಗೆಯೇ ವಿಜಯೋತ್ಸವದ ಹಿಂದಿನ ದಿನ ಜರುಗಿದ ಪತ್ರದ ವ್ಯವಹಾರ ಬಗ್ಗೆಯೂ ಚರ್ಚೆ.
* ಕಾಲ್ತುಳಿತ ಪ್ರಕರಣವನ್ನು ವಿಪಕ್ಷಗಳು ಅಸ್ತ್ರ ಮಾಡಿಕೊಂಡಿವೆ ಅನ್ನೋದರ ಬಗ್ಗೆ ರಾಹುಲ್​ಗೆ ಮನವರಿಕೆ.
* ಈಗಾಗಲೇ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮದ ಬಗ್ಗೆ ಮಾಹಿತಿ.

ಇದಿಷ್ಟೇ ಅಲ್ಲದೇ, ಈಗಾಗಲೇ ಕೆ.ಸಿ ವೇಣುಗೋಪಾಲ್​ಗೆ ದೂರವಾಣಿ ಮೂಲಕ ಸಿಎಂ ಮತ್ತು ಡಿಸಿಎಂ ಮಾಹಿತಿ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಲೋಪದೋಷದ ಬಗ್ಗೆಯೂ ಚರ್ಚೆಯಾಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್​ಗೆ ಮುಜುಗರವಾಗಿರುವ ಕಾಲ್ತುಳಿತ ದುರಂತದ ಬಗ್ಗೆ ಖುದ್ದಾಗಿ ರಾಹುಲ್ ಗಾಂಧಿ ವರದಿ ಪಡೆದುಕೊಳ್ಳಲಿದ್ದಾರೆ.


Spread the love

LEAVE A REPLY

Please enter your comment!
Please enter your name here