ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡದ ನಿವಾಸಿ ತಿಲಕ್ ಯಲಿಗಾರ ಎನ್ನುವವರು ಎದುರುದಾರ ಸ್ಟಾರ್ ಹೆಲ್ತ್ ಇನ್ಸುರೆನ್ಸ್ ಕಂಪನಿಯಲ್ಲಿ 5 ಲಕ್ಷ ರೂ.ಗಳಿಗೆ ತಮ್ಮ ಆರೋಗ್ಯ ವಿಮೆ ಮಾಡಿಸಿದ್ದರು. ಅವರು ಪ್ರತಿ ವರ್ಷ ರೂ 19,369 ವಿಮಾ ಕಂತನ್ನು ತುಂಬುತ್ತಿದ್ದರು. ವಿಮಾ ಅವಧಿ 15.01.2023 ರಿಂದ 14.01.2024 ರವರೆಗೆ ಚಾಲ್ತಿಯಲ್ಲಿತ್ತು.
10.10.2023 ರಂದು ದೂರುದಾರರು ಜ್ವರ ಮತ್ತು ಅಶಕ್ತತನದಿಂದ ಧಾರವಾಡದ ನಿರ್ಮಲಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ಶಿವಕುಮಾರ ತುರಮರಿ ಇವರಿಗೆ ತೋರಿಸಲು ವೈದ್ಯರು ಪರೀಕ್ಷಿಸಿ ದೂರುದಾರರಿಗೆ ಆಸ್ಪತ್ರೆಯಲ್ಲಿ ದಾಖಲಾಗಲು ಹೇಳಿದ್ದರು. ಅದರಂತೆ ದೂರುದಾರರು ದಾಖಲಾಗಿ ಚೇತರಿಸಿಕೊಂಡ ನಂತರ ಚಿಕಿತ್ಸೆಯ ಮೊತ್ತ 15 ಸಾವಿರ ರೂ.ಗಳನ್ನು ಪಾವತಿಸುವಂತೆ ಎದುರುದಾರರಿಗೆ ದಾಖಲೆಗಳೊಂದಿಗೆ ಕೇಳಿಕೊಂಡಿದ್ದರು.
ಆದರೆ, ಎದುರುದಾರರು ಆಸ್ಪತ್ರೆಯ ದಾಖಲೆ ಅವಶ್ಯಕತೆ ಇರಲಿಲ್ಲ ಎಂದು ಹೇಳಿ ಅವರ ಕ್ಲೇಮ್‌ನ್ನು ನಿರಾಕರಿಸಿದ್ದಾರೆ. ವಿಮಾ ಕಂಪನಿಯವರ ಅಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೇ ಹಾಗೂ ಸದಸ್ಯೆ ವಿಶಾಲಾಕ್ಷಿ ಅ. ಬೋಳಶೆಟ್ಟಿ, ದೂರುದಾರರು ಹಾಜರುಪಡಿಸಿದ ದಾಖಲೆಗಳನ್ನು ಅವಲೋಕಿಸಿದಾಗ, ದೂರುದಾರರು ವೈದ್ಯರ ಹೇಳಿಕೆಯ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಕಂಡು ಬಂದಿದೆ ಮತ್ತು ಎದುರುದಾರರು ಇದನ್ನು ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿ, ಎದುರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರ ವೈದ್ಯಕೀಯ ವೆಚ್ಚದ ಹಣ ರೂ. 15,000 ಮತ್ತು ಅದರ ಮೇಲೆ ದೂರು ಹಾಕಿದ ದಿನಾಂಕದಿಂದ ಪಾವತಿಯಾಗುವ ತನಕ ಶೇ. 10 ರಂತೆ ಬಡ್ಡಿ ಲೆಕ್ಕ ಹಾಕಿ ನೀಡುವಂತೆ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ.
ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ 25 ಸಾವಿರ ರೂ. ಪರಿಹಾರ ಮತ್ತು 5 ಸಾವಿರ ರೂ. ಪ್ರಕರಣದ ಖರ್ಚು-ವೆಚ್ಚ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ. ಈ ದೂರಿನಲ್ಲಿ ಅನಾವಶ್ಯಕವಾಗಿ ವೈದ್ಯರನ್ನು ಎದುರುದಾರರಾಗಿ ಸೇರಿಸಿರುವುದು ತಪ್ಪು ಎಂದು ಪರಿಗಣಿಸಿ ವೈದ್ಯರ ವಿರುದ್ಧ ದೂರನ್ನು ವಜಾಗೊಳಿಸಿದ ಆಯೋಗ, ದೂರುದಾರರು ದಂಡ ರೂಪವಾಗಿ 5 ಸಾವಿರ ರೂ.ಗಳನ್ನು ವೈದ್ಯರಿಗೆ ಕೊಡುವಂತೆ ತನ್ನ ತೀರ್ಪಿನಲ್ಲಿ ಹೇಳಿದೆ.


