ವಿಜಯಸಾಕ್ಷಿ ಸುದ್ದಿ, ಮುಳಗುಂದ: ಆಗಸ್ಟ್ 8 ಹಾಗೂ 9ರಂದು ಮುಳಗುಂದದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮೌಂಟೇನ್ ಬೈಕ್ (ಎಂಟಿಬಿ) ಸೈಕ್ಲಿಂಗ್ ಸ್ಪರ್ಧೆಗೆ ಗದಗ ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ ಭಾನುವಾರ ಪಟ್ಟಣದ ಯಲಿಶಿರುಂಜ ರಸ್ತೆಯ ಗುಡ್ಡಗಾಡು ಪ್ರದೇಶದ ಸೈಕ್ಲಿಂಗ್ ಟ್ರ್ಯಾಕ್‌ನಲ್ಲಿ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 80 ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಂಡರ್-14 ವಿಭಾಗದಲ್ಲಿ 4 ಬಾಲಕರು ಹಾಗೂ 4 ಬಾಲಕಿಯರು, ಅಂಡರ್-16 ವಿಭಾಗದಲ್ಲಿ 3 ಬಾಲಕರು ಮತ್ತು 3 ಬಾಲಕಿಯರು, ಜೂನಿಯರ್ ವಿಭಾಗದಲ್ಲಿ 2 ಬಾಲಕರು ಹಾಗೂ 1 ಬಾಲಕಿಯನ್ನು, ಎಲೈಟ್ ಪುರುಷರ ವಿಭಾಗದಲ್ಲಿ ಒಬ್ಬ ಹಾಗೂ ಎಲೈಟ್ ಮಹಿಳಾ ವಿಭಾಗದಲ್ಲಿ ಒಬ್ಬ ಕ್ರೀಡಾಪಟುವನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.
ಆಯ್ಕೆಯಾದ ಕ್ರೀಡಾಪಟುಗಳು ಆಗಸ್ಟ್ 8 ಮತ್ತು 9ರಂದು ಮುಳಗುಂದದಲ್ಲಿ ನಡೆಯುವ ರಾಜ್ಯಮಟ್ಟದ ಎಂಟಿಬಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ತಾಂತ್ರಿಕ ಸಲಹೆಗಾರ ಎಂ.ಐ. ಕಣಕೆ, ಜಿಲ್ಲಾ ಅಧ್ಯಕ್ಷ ಎಸ್.ವಿ. ಕಣವಿ, ಚಂದ್ರಶೇಖರ ದೊಡ್ಡಮನಿ, ದಾವಲ್ ಕುರ್ತಕೋಟಿ ಸೇರಿದಂತೆ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.



