ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಒಳಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗುವ ಸಾಧ್ಯತೆ ಇದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಸಮಾಜಕ್ಕೆ ನ್ಯಾಯ ಒದಗಿಸದಿದ್ದರೆ, ರಾಜ್ಯಾದ್ಯಂತ ‘ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ’ ಅಭಿಯಾನ ಆರಂಭಿಸಲಾಗುವುದು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಕೆ. ಲಮಾಣಿ ಎಚ್ಚರಿಕೆ ನೀಡಿದರು.
ತಾಲೂಕಿನ ವರವಿಯ ಶ್ರೀ ಮೌನೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲಾ ಬಂಜಾರ ಸಮಾಜ ಆಯೋಜಿಸಿದ್ದ ‘ದಿಕ್ಸೂಚಿ ಬಂಜಾರ – ನಮ್ಮ ಮೀಸಲಾತಿ, ನಮ್ಮ ಹಕ್ಕು’ ಚಿಂತನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಳಮೀಸಲಾತಿ ಹಂಚಿಕೆ ವೇಳೆ ಬಂಜಾರ ಸಮಾಜದ ಜನಸಂಖ್ಯೆ, ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆ ಸೇರಿದಂತೆ ವಾಸ್ತವಾಂಶಗಳನ್ನು ಪರಿಗಣಿಸದೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಮಾಜದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಅನ್ಯಾಯವಾಗುವ ಸಾಧ್ಯತೆ ಇದೆ. ಬಂಜಾರ ಸಮಾಜದ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ನಿರ್ಧಾರ ಬದಲಿಸದಿದ್ದರೆ ತಾಂಡಾಗಳಿಂದ ಆರಂಭಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ, ಧರಣಿ, ರಸ್ತೆ ತಡೆ ಸೇರಿದಂತೆ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಂಸದ ಡಾ. ಉಮೇಶ ಜಾಧವ ಹಾಗೂ ಔರಾದ ಶಾಸಕ ಪ್ರಭು ಚವ್ಹಾಣ ಮಾತನಾಡಿ, ಬಂಜಾರ ಸಮಾಜ ಹಲವು ದಶಕಗಳಿಂದ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತ ಬಂದಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು. ಬಂಜಾರ ಸಮಾಜದ ನೈಜ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೂವಿನಹಡಗಲಿ ಶಾಸಕ ಕೃಷ್ಣಾ ನಾಯಕ, ಮುಖಂಡರಾದ ಬಸವರಾಜ ನಾಯಕ, ಮಣಿಕಂಠ ರಾಠೋಡ, ಲಿಂಬು ನಾಯಕ, ರವಿ ಸಾವಕಾರ, ಭೀಮಸಿಂಗ್ ರಾಠೋಡ, ಸುಭಾಷ ಗುಡಿಮನಿ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಾನು ಲಮಾಣಿ, ಮಲ್ಲೇಶ ಲಮಾಣಿ, ತಿಪ್ಪಣ್ಣ ಲಮಾಣಿ, ಮಂಜು ನಾಯಕ, ಅನಿಲ ಕಾರಬಾರಿ, ಟಿ.ಡಿ. ಲಮಾಣಿ, ಮಾನು ನಾಯಕ, ಪರಮೇಶ ಲಮಾಣಿ, ಆನಂದ ನಾಯಕ, ಸಂತೋಷ ಲಮಾಣಿ, ಮುತ್ತು ಲಮಾಣಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ನೂರಾರು ಸದಸ್ಯರು ಉಪಸ್ಥಿತರಿದ್ದರು.



